ಜಿಲ್ಲೆಯ ರೈತರ ಪಾಲಿಗೆ ವರದಾನವಾಗುವ ಮೆಗಾಡೈರಿ ಇನ್ನು ಒಂದೂವರೆ ತಿಂಗಳಲ್ಲಿ ಉದ್ಘಾಟನೆಯಾಗಲಿದ್ದು,ಜಿಲ್ಲೆಯ ರೈತರ ಬಹುದಿನಗಳ ಕನಸು ನನಸಾಗಲಿದೆ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.
ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಬಿಎಂಸಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಗಾಡೈರಿ ಸ್ಥಾಪನೆಯಿಂದ ಹಾಲಿನ ಸಾಗಣೆ ವೆಚ್ಚ,ನಿರ್ವಹಣಾ ವೆಚ್ಚ ತುಂಬಾ ಕಡಿಮೆಯಾಗಲಿದೆ. ಒಂದು ಲೀಟರ್ ಹಾಲಿಗೆ 4-5 ರೂಪಾಯಿ ಉಳಿತಾಯವಾಗುವುದರಿಂದ ಅದರಲ್ಲಿ 2 ರಿಂದ 3 ರೂ.ಗಳನ್ನು ರೈತರಿಗೆ ಹೆಚ್ಚುವರಿಯಾಗಿ ನೀಡಬಹುದು.ಹಾಗಾಗಿ ಮೆಗಾಡೈರಿ ರೈತರ ಪಾಲಿಗೆ ವರದಾನವಾಗಲಿದೆ ಎಂದರು.
ರಾಜ್ಯದ ಹದಿನಾಲ್ಕು ಒಕ್ಕೂಟಗಳ ಪೈಕಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ 5ನೇ ಸ್ಥಾನದಲ್ಲಿದೆ.ಮೆಗಾಡೈರಿ ಯಶಸ್ವಿಯಾಗಿ ನಡೆದರೆ ಮಂಡ್ಯ ಹಾಲು ಒಕ್ಕೂಟ ಒಂದನೇ ಸ್ಥಾನಕ್ಕೆ ಬರಲಿದೆ. ರೈತರು ಬಿಎಂಸಿ ಘಟಕಕ್ಕೆ ಉತ್ತಮ ಗುಣಮಟ್ಟದ ಹಾಲು ಹಾಕಬೇಕು.ಪೌಡರ್,ರಾಸಾಯನಿಕ ಬಳಸಿದ ಹಾಲು ತಂದರೆ ಅದರಿಂದ ಉಳಿದ ರೈತರಿಗೆ ನಷ್ಟವಾಗುತ್ತದೆ.
ಬಿಎಂಸಿ ಘಟಕದಲ್ಲಿ ಪ್ರತಿದಿನ ಮೂರು ಸಾವಿರ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತದೆ.ಯಾರೋ ಒಬ್ಬರು ಕಳಪೆ ಗುಣಮಟ್ಟದ ಹಾಲು ನೀಡಿದರೆ ಅಂದು ಸಂಗ್ರಹವಾದ ಮೂರು ಸಾವಿರ ಲೀಟರ್ ಹಾಲು ಕೆಟ್ಟು ಹೋಗಿ ನಷ್ಟವಾಗುತ್ತದೆ. ಹಾಗಾಗಿ ರೈತರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಒಕ್ಕೂಟದ ಅಭಿವೃದ್ಧಿ ಜೊತೆಗೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.