Thursday, November 19, 2026

ಪ್ರಾಯೋಗಿಕ ಆವೃತ್ತಿ

ನಳ – ಜಲ ಯೋಜನೆ ಸದುಪಯೋಗ ಪಡಿಸಿಕೊಳ್ಳಿ ; ಶಾಸಕ ಉದಯ್

ಯೋಜನೆಯಡಿ ರೂಪಿಸಿರುವ ನೀರು ವಿತರಣಾ ನಿರ್ವಾಹಣ ಕೆಲಸವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಹೇಳಿದರು.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್ ಆರ್ ಎಲ್ ಎಂ ಹಾಗೂ ಜಿ.ಟಿ.ಟಿ‌.ಸಿ ಕಾಲೇಜು ಇವರ ಸಹಯೋಗದಲ್ಲಿ ಮದ್ದೂರಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಟೂಲ್ ಕಿಟ್ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಳ ಜಲ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರು ಅಧಿಕಾರಿಗಳ ಬಳಿ ಮಾರ್ಗದರ್ಶನ ಪಡೆದು ಸ್ವಾತಂತ್ರ್ಯವಾಗಿ ಸ್ವತಃ ನೀವೇ ಪ್ಲಂಬಿಂಗ್, ಎಲೆಕ್ಟ್ರೀಷನ್, ಮೇಸನ್ (ಮನೆ ಕಟ್ಟುವ ಕೆಲಸ) ನಿರ್ವಹಿಸಿ ಆರ್ಥಿಕ ಅಭಿವೃದ್ಧಿ ಕಾಣಬಹುದು. ಇಡೀ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಲ್ ಜಲ್ ಯೋಜನೆಯಡಿ ತರಬೇತಿಯನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಯಾವುದೇ ಕೆಲಸವನ್ನು ಹೆಣ್ಣುಮಕ್ಕಳು ಮಾಡಬಲ್ಲರು ಎಂಬ ಉದ್ದೇಶದಿಂದ ಸರ್ಕಾರ ಸ್ವಸಹಾಯ ಗುಂಪುಗಳ ಆಸಕ್ತ ಮಹಿಳೆಯರಿಗೆ ನಲ್ ಜಲ್ ತರಬೇತಿಯನ್ನು ಕೊಡಿಸುವ ಕೆಲಸ ಮಾಡುತ್ತಿದೆ, ಒಡಿಸ್ಸಾ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಿಂದ ಬಂದ ಹೆಣ್ಣು ಮಕ್ಕಳು ಇಂದು ಸಿವಿಲ್ ಇಂಜಿನಿಯರಿಂಗ್, ಮೆಕಾನಿಕ್ ಇಂಜಿನಿಯರಿಂಗ್ ನಂತಹ ಪದವಿ ಪಡೆದು ದುಬೈ ನಂತಹ ದೇಶಗಳಲ್ಲಿ ಕಟ್ಟಡ ನಿರ್ಮಾಣದ ಸಂಪೂರ್ಣ ಕೆಲಸವನ್ನು ಹೆಣ್ಣುಮಕ್ಕಳೆ ಸ್ವತಂತ್ರವಾಗಿ ಮಾಡುತ್ತಿದ್ದಾರೆ, ಪ್ರಸ್ತುತ ಅವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ “ಐರನ್ ಗರ್ಲ್ಸ್ ಆಫ್ ಒಡಿಸ್ಸಾ” ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.

ಅದೆ ರೀತಿ ಮದ್ದೂರಿನಲ್ಲಿ ನಲ್ ಜಲ್ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರು “ವಾಟರ್ ಗರ್ಲ್ಸ್ ಆಫ್ ಮದ್ದೂರು” ಎಂದು ಕೀರ್ತಿ ಪಡೆಯಬೇಕು. ನಾನು ಸಹ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು ಹೆಣ್ಣು ಮಕ್ಕಳು ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡಬಲ್ಲೆ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ಕೆಲಸ ಹುಡುಕಲು ಪರವಾಲಂಭಿತರಾಗಬೇಡಿ ಸ್ವಸಹಾಯ ಗುಂಪುಗಳು ಎಲ್ಲಿ ಕೆಲಸದ ಲಭ್ಯತೆ ಇದೆ ಎಂಬುದನ್ನು ತಿಳಿಯಲು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ತರಬೇತಿ ಪಡೆದ ಮಹಿಳೆಯರು ಗುಂಪುಗಳನ್ನು ಮಾಡಿಕೊಂಡು ಯಾವ ಯಾವ ಗುಂಪಿನಲ್ಲಿ ಎಲ್ಲೆಲ್ಲಿ ನಲ್ಲಿಗಳು ದುರಸ್ಥಿಗೊಂಡಿದೆ, ಎಲ್ಲೆಲ್ಲಿ ಪೈಪ್ ದುರಸ್ಥಿ ಆಗಬೇಕು ಎಂಬುದನ್ನು ತಿಳಿದುಕೊಂಡು ಸರಿಪಡಿಸಿ, ಅಧಿಕಾರಿಗಳು ಕೆಲಸ ಮಾಡಿದ ಮಹಿಳೆಯರಿಗೆ ಅನುಕೂಲವಾಗುವಂತೆ ದರ ಪಟ್ಟಿಯನ್ನು ನಿಗದಿ ಪಡಿಸಿ. ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಲ್ಲಿಗಳು ದುರಸ್ಥಿಗೊಂಡರೆ ತಕ್ಷಣ ಅಲ್ಲಿಗೆ ಹೋಗಿ ಅದನ್ನು ಸರಿಪಡಿಸಬೇಕು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗನಂದ್ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ “ಜಲ್ ಜೀವನ್ ಮಿಷನ್” ಜಾರಿಯಲ್ಲಿದೆ, ಪ್ರತಿ ಮನೆಗೂ ನಲ್ಲಿಯ ಮೂಲಕ ನೀರು ನೀಡುವುದು ಸದರಿ ಯೋಜನೆಯ ಮೂಲ ಉದ್ದೇಶ, ಈ ಯೋಜನೆ ನಿರ್ವಹಣೆ ಮಾಡಲು ನಲ್ ಜಲ್ ಯೋಜನೆ ರೂಪಿಸಿ ಆಸಕ್ತ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಪ್ಲಂಬಿಂಗ್ ತರಬೇತಿ ನೀಡುವುದಾಗಿದೆ ಎಂದು ತಿಳಿಸಿದರು.

ನಲ್ ಜಲ್ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರಿಗೆ ಶಾಸಕ ಕೆ.ಎಂ, ಉದಯ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗನಂದ್ ಅವರು ಟೂಲ್ ಕಿಟ್ ಮತ್ತು ಪ್ರಮಾಣ ಪತ್ರ ನೀಡಿದರು.

ಸಭೆಯಲ್ಲಿ ಮದ್ದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ರಾಮಲಿಂಗಯ್ಯ, ಜಿಟಿಟಿಸಿ ಪ್ರಾಂಶುಪಾಲರಾದ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಧುಸೂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ