ಎಂ.ಬಿ.ನಾಗಣ್ಣಗೌಡ
ಪತ್ರಕರ್ತ, ಹೋರಾಟಗಾರರು
ಈ ನೆಲದ ಭಾಷೆಯ ಆತಂಕ ಮತ್ತು ಅದರ ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕಿತ್ತು. ಮಂಡ್ಯದ ಸಮ್ಮೇಳನ ಸಾಗುತ್ತಿರುವ ರೀತಿ ನೋಡಿದರೆ ಈ ಯಾವ ಆಶಯಗಳೂ ಇರುವಂತೆ ಕಾಣುತ್ತಿಲ್ಲ. ಒಬ್ಬ ಸಾಹಿತ್ಯಾಸಕ್ತನಾಗಿ ದೊಡ್ಡವರ ಸ್ವಾರ್ಥ, ಕಾಲೆಳೆದಾಟ, ಸಮ್ಮೇಳನಾಧ್ಯಕ್ಷತೆಗಾಗಿ ಜಾತಿ ಲಾಬಿ, ಕಸಾಪ ಮೂಲ ಉದ್ದೇಶವನ್ನೇ ಮರೆತು ಸಾಹಿತ್ಯೇತರರನ್ನು ತಂದು ಕೂರಿಸಬೇಕೆನ್ನುವ ದಾರ್ಷ್ಟ್ಯ ಅಪಾರ ನೋವುಂಟು ಮಾಡಿದೆ.
ಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ನಾಡು ನುಡಿಗೆ ಪೂರಕವಾದ ಸಿನಿಮಾಗಳ ನಿರ್ಮಾಣ, ಸಮ್ಮೇಳನಗಳಲ್ಲಿ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿ ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾದ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ.
ಕನ್ನಡ ಅಂದ್ರೆ ನಮ್ಮ ತಾಯಿ ಇದ್ದ ಹಾಗೆ. ತಾಯ್ನುಡಿಯ ಹೆಸರಲ್ಲಿ ಏನೆಲ್ಲಾ, ಎಷ್ಟೆಲ್ಲಾ ಅನಾಚಾರಗಳು ನಡೆಯುತ್ತಿವೆ. ಸ್ವಾರ್ಥ ಸಾಧನೆಗೆ ಸಾಹಿತ್ಯ ಸಮ್ಮೇಳನವೇ ಬೇಕೆ? ಸಾಹಿತಿಗಳ ಸಮ್ಮೇಳನದಲ್ಲಿ ಸಾಹಿತ್ಯೇತರರಿಗೇನು ಕೆಲಸ? ಇವರಿಗೆ ಬುದ್ದಿ ಹೇಳುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ತಪ್ಪುಗಳನ್ನು ಸರಿಪಡಿಸಬೇಕು.




