Friday, November 20, 2026

ಪ್ರಾಯೋಗಿಕ ಆವೃತ್ತಿ

ಮೌಲ್ಯಯುತ ಜೀವನ ಕ್ರಮ ಅಳವಡಿಸಿಕೊಳ್ಳಿ – ವಿಜಯ್ ಆನಂದ್

ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ಅವಧಿಯಲ್ಲಿ ಗುರು -ಹಿರಿಯರು ಹಾಗೂ ಪೋಷಕರನ್ನು ಗೌರವಿಸುವ ತಮಗೆ ಜನ್ಮ ನೀಡಿದ ಹುಟ್ಟೂರಿನ ಬಗ್ಗೆ ಮಮತೆ ತೋರುವ ಮೌಲ್ಯಯುತ ಜೀವನ ಕ್ರಮವನ್ನು ಅಳವಡಿಸಿಕೊಳ್ಳಲು ಮುಂದಾಗಬೇಕೆಂದು ಪಿಇಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.

ಮಂಡ್ಯ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಹೆಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪ್ರಥಮ ಹಾಗೂ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ದಿಕ್ಸೂಚಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡ ನೂತನ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಧನ್ಯವಾದ ಅರ್ಪಿಸಿದ ಸಂಸ್ಥೆಯ ಅಧ್ಯಕ್ಷರು ವಿದ್ಯಾರ್ಥಿಗಳ ಜೀವನ ಕ್ರಮದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಪೋಷಕರ ಆರ್ಥಿಕ ಸಂಕಷ್ಟದ ಅರಿವು ಹೊಂದಬೇಕು. ಮೊಬೈಲ್ ಹಾಗೂ ಬೈಕ್ ವ್ಯಾಮೋಹವನ್ನು ಮಿತಿಯಾಗಿ ಇಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ತಂದೆ- ತಾಯಿ, ಶಿಕ್ಷಕ, ಹುಟ್ಟೂರಿನ ಬಗ್ಗೆ ವಾತ್ಸಲ್ಯ ರೂಢಿಸಿಕೊಳ್ಳಬೇಕು. ಕಲಿಕೆ ಎಂದಿಗೂ ನಾಶವಾಗುವುದಿಲ್ಲ ಎಂಬ ಸತ್ಯವನ್ನು ಅರಿತು ಅನ್ಯ ಮಾರ್ಗದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ಪ್ರವೃತ್ತಿಯಿಂದ ದೂರವಿರಬೇಕೆಂದರು.

ಭವಿಷ್ಯದ ಸವಾಲು ಎದುರಿಸಲು ಸಜ್ಜುಗೊಳ್ಳಿ – ಡಾ.ಎಸ್.ವಿನಯ್

ವಿದ್ಯಾರ್ಥಿಗಳಲ್ಲಿರುವ ಕಲಿಕಾಸಕ್ತಿ ಹಾಗೂ ವ್ಯಕ್ತಿತ್ವಾಭಿವೃದ್ದಿಗೆ ಲಭ್ಯವಿರುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ತಮ್ಮ ಶೈಕ್ಷಣಿಕ ಪಯಣವನ್ನು ಉತ್ತಮ ದೃಷ್ಠಿಕೋನದೊಂದಿಗೆ ಆರಂಭಿಸಲು ದಿಕ್ಸೂಚಿ (ಓರಿಯಂಟೆಷನ್ ಪ್ರೋಗ್ರಾಂ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿನಯ್ ಎಸ್ ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಅವರು, ನಿತ್ಯ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೆ.ವಿ.ಶಂಕರಗೌಡರ ದೂರದೃಷ್ಠಿಯಿಂದ 1962 ರಲ್ಲಿ ಕಾರ್ಯಾರಂಭಗೊಂಡಿರುವ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಗ್ರಾಮೀಣ ರೈತ ಪ್ರತಿಭೆಗಳ ಆಶಾ ಕಿರಣವಾಗಿ ಹೊರಹೊಮ್ಮಿ ರಾಜ್ಯದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಎದುರಾಗುತ್ತಿರುವ ಸವಾಲು, ನಾವಿನ್ಯತೆಗಳನ್ನು ಉತ್ತಮ ಪೈಪೋಟಿಯಲ್ಲಿ ಎದುರಿಸಲು ಅಗತ್ಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಟ್ರಸ್ಟ್ ಅಧ್ಯಕ್ಷರಾದ ವಿಜಯ್ ಆನಂದ್ ಅವರ ದೂರದೃಷ್ಟಿ ಸಂಸ್ಥೆಗೆ ತೇಜಸ್ಸು ಮತ್ತು ಶಕ್ತಿ ತುಂಬಿದೆ ಎಂದು ವಿನಯ್ ಮುಕ್ತಕಂಠದಿಂದ ಪ್ರಶಂಸಿದರು.

ತಾಂತ್ರಿಕ ಶಿಕ್ಷಣದ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮುನ್ನೆಡೆಯುತ್ತಿರುವ ನಮ್ಮ ಸಂಸ್ಥೆಯು ವಿಶ್ವಸಂಸ್ಥೆ 18 ಕೋಟಿ ರೂ. ಅನುದಾನ ಹಾಗೂ ರಾಷ್ಟ್ರದಲ್ಲಿರುವ 6 ಸಾವಿರ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 201\300 ರ್‍ಯಾಂಕಿಂಗ್ ಕ್ರಮಾಂಕದಲ್ಲಿದ್ದು, ನ್ಯಾಕ್ ಪಟ್ಟಿಯಲ್ಲಿ ಎ ಗ್ರೇಡ್ ಸಾಧನೆಗೈದಿದ್ದು, ಆಟೋಮೊಬೈಲ್ ಸೇರಿದಂತೆ ಹಲವು ಕೋರ್ಸ್ ಗಳ ಸಂಶೋಧನೆ ಹಾಗೂ ನಾವಿನ್ಯತೆಗೆ ಬಲತುಂಬಲಾಗಿದೆ ಎಂದು ತಿಳಿಸಿದರು.

ಐಐಟಿ ಮತ್ತು ಎನ್ಐಟಿಯ ಪಠ್ಯೇತರ ಚಟುವಟಿಕೆಯಲ್ಲಿ ನಮ್ಮ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ಭಾಗಿಯಾಗುತ್ತಿರುವುದು ಹಾಗೂ ಕ್ರೀಡಾ ಉತ್ತೇಜನದ ಮೂಲಕ ಯುವಶಕ್ತಿಯನ್ನು ಪ್ರೇರೇಪಿಸುವುದು ಹಾಗೂ ಸಧೃಡ ಯುವ ಜನಾಂಗಕ್ಕೆ ಅಗತ್ಯ ಉದ್ಯೋಗ ಒದಗಿಸುವ ಹೆಗ್ಗುರಿ ನಮ್ಮ ಸಂಸ್ಥೆಯದ್ದಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರ ಮುತುವರ್ಜಿಯಿಂದ ಇನ್ನಷ್ಟು ಯಶಸ್ಸು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕೆ.ವಿ.ಶಂಕರಗೌಡ ಹಾಗೂ ಅವರ ಬಳಗದ ವತಿಯಿಂದ 1962 ರಲ್ಲಿ ನಿರ್ಮಾಣಗೊಂಡಿರುವ ಪಿಇಟಿ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ನಿರ್ಗಮಿತ ಅಧ್ಯಕ್ಷರಾಗಿದ್ದ ಹೆಚ್.ಡಿ.ಚೌಡಯ್ಯನಗರ ದೂರದೃಷ್ಠಿಯಿಂದ ಕ್ಯಾಂಪಸ್ ನಲ್ಲಿ ಅತ್ಯುತ್ತಮ ಕ್ರೀಡಾ ಸೌಲಭ್ಯವಿದ್ದು, ಇದರ ಸದ್ಬಳಕೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಕ್ರೀಡಾಸಕ್ತಿಯನ್ನು ವೃದ್ದಿಸುವ ಸದುದ್ದೇಶದಿಂದ ಮಹಿಳಾ ದೈಹಿಕ ಶಿಕ್ಷಣ ನಿರ್ದೇಶಕರನ್ನು ನಿಯೋಜಿಸಿ ಇತರೆ ಇಂಜಿಯರಿಂಗ್ ಕಾಲೇಜುಗಳಿಗೆ ನಾವು ಮಾದರಿಯಾಗಿದ್ದೇವೆ. ಭವಿ‍ಷ್ಯ ಏರ್ ಪೋರ್ಸ್ ಸಂಬಂಧಿತ ಕೋರ್ಸ್ ಆರಂಭಿಸಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರ್ಮನ್ ಇಂಡಿಯಾ ಮತ್ತು ಎಸ್.ವಿ.ಪಿ ಆಟೋ ಮೆಟಿವ್, ಆರ್ & ಡಿ ಕೌಂಟ್ರಿ ಲೀಡ್ ಅರ್ಮನ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಕೃ‍ಷ್ಣಕುಮಾರ್ ಮಾತನಾಡಿ ಪ್ರತಿ ವಿದ್ಯಾರ್ಥಿಯು ಜೀವನ ಮೌಲ್ಯವನ್ನು ವೃದ್ದಿಸಿಕೊಳ್ಳಬೇಕು. ಕೌಶಲ್ಯತೆ ವೃದ್ದಿಸಿಕೊಳ್ಳುವ ಜೊತೆಗೆ ನಿಷ್ಠೆ, ಪ್ರಾಮಾಣಿಕತೆ ಹಾಗೂ ಆಸಕ್ತಿಯನ್ನು ರೂಢಿಸಿಕೊಳ್ಳಬೇಕೆಂದರು.

ಪಿಇಟಿ ಸಂಸ್ಥಾಪಕರಾದ ಕೆ.ವಿ.ಶಂಕರಗೌಡರು ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಸರ್ಕಾರ ಚಿಕಿತ್ಸಾ ವೆಚ್ಚ ಪಾವತಿಗೆ ಮುಂದಾದಾಗ ಸಾರ್ವಜನಿಕ ತೆರಿಗೆ ಹಣ ಅಗತ್ಯವಿಲ್ಲವೆಂದು ನಿರಾಕರಿಸಿ ಸಾಲ ಮಾಡಿ ಚಿಕಿತ್ಸಾ ವೆಚ್ಚ ಪಾವತಿಸಿ ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ. ಅಂತಹ ಆದರ್ಶಗಳ ಪಾಲನೆಯಾಗಬೇಕೆಂದರು.

ಪ್ರತಿ ವಿದ್ಯಾರ್ಥಿಯು ಇಚ್ಚಾಶಕ್ತಿ, ಜ್ಞಾನಾಸಕ್ತಿ, ಕ್ರಿಯಾಶಕ್ತಿ ರೂಢಿಸಿಕೊಳ್ಳಬೇಕು, ಯಶಸ್ಸು ಸುಲಭದ ತುತ್ತಲ್ಲ, ನಿರಂತರ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್, ಪ್ರಾಂಶುಪಾಲ ಡಾ.ಎನ್.ಎಲ್.ಮುರುಳಿಕೃಷ್ಣ, ಉಪ ಪ್ರಾಂಶುಪಾಲ ಡಾ.ವಿನಯ್ ಎಸ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ