ಆರೋಗ್ಯ ಹಾಗೂ ಮಾನಸಿಕ ಸ್ಥಿತಿ ಸದೃಢವಾಗಿ ಇಟ್ಟಿಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗಾಭ್ಯಾಸವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ, ಯೋಗ ಅಭ್ಯಾಸದಲ್ಲಿ ಭಾರತ ವಿಶ್ವಕ್ಕೆ ವಿಶ್ವಗುರುವಾಗಿದೆ, ಯೋಗಭ್ಯಾಸದಿಂದ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಬಹುದು, ಪ್ರತಿಯೊಬ್ಬರು ಯೋಗಾಭ್ಯಾಸ ಮತ್ತು ಧ್ಯಾನ ಮಾಡುವ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಅಷ್ಟಾಂಗ ಯೋಗವನ್ನು ಸಿದ್ದಿ ಪಡಿಸಿಕೊಳ್ಳುವುದು ಸುಲಭದ ಮಾತಲ್ಲ, ಅಷ್ಟಾಂಗ ಯೋಗವನ್ನು ಸಿದ್ದಿ ಪಡಿಸಿಕೊಂಡ ಎಷ್ಟು ಋಷಿ ಮುನಿಗಳು ಇಂದು ಜೀವಂತವಾಗಿ ಇದ್ದಾರೆ, ಯೋಗಕ್ಕೆ ಸರಿಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಿದರು.
ಪತಾಂಜಲಿ ಮುನಿಗಳು ಯೋಗದ ಮಹತ್ವವನ್ನು ಜಗತ್ತಿಗೇ ಸಾರಿದರು.ಪ್ರಸುತ್ತ ಆಯುರ್ವೇದ ವಿಸಾ ಕೇಂದ್ರಗಳು ಸ್ಥಾಪನೆಯಾಗಿದೆ, ಯೋಗ ಜಗತ್ತಿನಾದ್ಯಂತ 50 ಮಿಲಿಯನ್ ಗೂ ಅಧಿಕ ವ್ಯಾಪಾರ ವಹಿವಾಟು ಹೊಂದಿದೆ, ಪ್ರವಾಸೋದ್ಯಮದಲ್ಲೂ ಸಹ ಯೋಗವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ ಎಂದು ಹೇಳಿದರು.
ಆಯುಷ್ ಇಲಾಖೆ ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ, ಯೋಗವನ್ನು ಕಲಿಯಲಿಕ್ಕಾಗಿ ವಿದೇಶಿಗರು ಭಾರತಕ್ಕೆ ಬರುತ್ತಿರುವುದನ್ನು ಇಂದು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಅವರು ಯೋಗಾಪಟುಗಳೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು. ಯೋಗ ಪಟುಗಳು ಹಾಗೂ ಆಯುಷ್ ಇಲಾಖೆಯವರಿದಿಂದ ನೃತ್ಯ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ: ಪುಷ್ಪಲತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




