ರಾಜ್ಯದಲ್ಲಿ ನಡೆಸುತ್ತಿರುವ ಸಮೀಕ್ಷೆಗೆ ಸರಿಯಾದ ತರಬೇತಿ ನೀಡದ ಕಾರಣ ಸಮೀಕ್ಷೆದಾರರು ಸರಿಯಾದ ಮಾಹಿತಿ ಸಂಗ್ರಹಿಸದೇ ಲೋಪವೆಸಗುತ್ತಿದ್ದಾರೆಂದು ಆರೋಪಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನಲ್ಲಿಗೆರೆ ಬಾಲು, ಸರ್ಕಾರ ಕೂಡಲೇ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ನಡೆಯುತ್ತಿರುವ ಸಮೀಕ್ಷೆಗೆ ಸಂಬಂಧಿಸಿದಂತೆ ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡದೇ ಗೊಂದಲದ ಗೂಡಾಗಿದೆ. ಒಕ್ಕಲಿಗ ಸಮುದಾಯದವನ್ನು ಗುರಿಯಾಗಿಸಕೊಂಡು ಈ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆದಾರರು ತಪ್ಪು ಮಾಹಿತಿ ನಮೂದಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಕಂಡು ಬಂದಿದೆ. ಅದಲ್ಲದೇ ದೂರವಾಣಿ ಕರೆಯ ಮೂಲಕವೂ ಸಮೀಕ್ಷೆಯ ಸಂಬಂಧ ದೂರುಗಳು ಕೇಳಿ ಬರುತ್ತಿವೆ ಎಂದು ದೂರಿದರು.
ತಪ್ಪು ಮಾಹಿತಿ ಸಂಗ್ರಹಿಸುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುವ ಸಂಭವವಿದೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿ ಹೋರಾಟ ಮಾಡಿದರೂ ತರಬೇತಿ ಕೊರತೆಯಿಂದ ತಪ್ಪು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡಿ ನಂತರ ಮರು ಸಮೀಕ್ಷೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) ಮಾತನಾಡಿ, ಸಮೀಕ್ಷೆದಾರರಿಗೆ ಎಲ್ಲಿಯೂ ಸರಿಯಾದ ತರಬೇತಿ ನೀಡಲಾಗಿಲ್ಲ. ತೋಚಿದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಮೀಕ್ಷೆದಾರರಿಗೆ ತರಬೇತಿ ನೀಡಿದ ಮಾಹಿತಿ ನಗರಸಭೆಯ ಅಧ್ಯಕ್ಷನಾಗಿದ ನನಗೆ ತಿಳಿದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೊದಲು ಜಾತಿ ಸಮೀಕ್ಷೆ ಎಂದು ಹೇಳಿ ಇದೀಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎನ್ನುತ್ತಿದ್ದಾರೆ. ಈ ಸಮೀಕ್ಷೆಯಿಂದ ಒಕ್ಕಲಿಗ ಸಮುದಾಯದಕ್ಕೆ ಅನ್ಯಾಯವಾಗಲಿದೆ. ಸರಕಾರ ಸರಿಯಾದ ತರಬೇತಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಒಕ್ಕಗಲಿಗ ಸಮಾಜದ ಮುಖಂಡರಾದ ಎಲ್.ಕೃಷ್ಣ, ಸಿ.ಜೆ.ಗಂಗಾಧರ್, ರಾಘವೇಂದ್ರ, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಮಂಡ್ಯ ಜಿಲ್ಲಾ ಒಕ್ಕಲಿಗರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜೆ.ತಮ್ಮಯ್ಯ, ವೇಣುಗೋಪಾಲ್ ಉಪಸ್ಥಿತರಿದ್ದರು.




