Friday, November 20, 2026

ಪ್ರಾಯೋಗಿಕ ಆವೃತ್ತಿ

ಸಿಜೆಐ ಮೇಲೆ ಶೂ ಎಸೆತ ಯತ್ನಕ್ಕೆ ಖಂಡನೆ ; ರಾಷ್ಟ್ರವ್ಯಾಪಿ ಪ್ರತಿಭಟನೆಗೆ ವಕೀಲರ ಸಂಘಟನೆಗಳ ಕರೆ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ನಡೆದ ಶೂ ಎಸೆದ ಘಟನೆಯ ವಿರುದ್ಧ ದೇಶದಾದ್ಯಂತ ವಕೀಲರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಕ್ಟೋಬರ್ 7 ಮತ್ತು 8ರಂದು ರಾಷ್ಟ್ರಮಟ್ಟದ ಪ್ರತಿಭಟನೆ ನಡೆಸಲು ಕರೆ ನೀಡಿವೆ. ತೆಲಂಗಾಣದ ಹನುಮಕೊಂಡ ವಕೀಲರ ಸಂಘ ಸೇರಿದಂತೆ ಅನೇಕ ರಾಜ್ಯಗಳ ಬಾರ್ ಅಸೋಸಿಯೇಷನ್‌ಗಳು ಕೋರ್ಟ್ ಕಲಾಪ ಬಹಿಷ್ಕಾರ ಘೋಷಿಸಿದ್ದು, ನ್ಯಾಯಾಂಗದ ಗೌರವ ಮತ್ತು ಸ್ವಾಯತ್ತತೆಯನ್ನು ರಕ್ಷಿಸಲು ಇದು ಅಗತ್ಯ ಕ್ರಮವೆಂದು ತಿಳಿಸಿವೆ.

ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವ ಈ ಘಟನೆ ಸೋಮವಾರ (ಅಕ್ಟೋಬರ್ 6) ನವದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ವಿಚಾರಣೆಯ ವೇಳೆ ವಕೀಲ ರಾಕೇಶ್ ಕಿಶೋರ್ ಎಂಬಾತ ಸಿಜೆಐ ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದರು. ಭದ್ರತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಅವರನ್ನು ಬಂಧಿಸಿದರೂ, ಸುಪ್ರೀಂ ಕೋರ್ಟ್ ರಜಿಸ್ಟ್ರಿಯು ಯಾವುದೇ ದೂರು ದಾಖಲಿಸದೆ ಬಿಡುಗಡೆ ಮಾಡಿರುವುದು ವಿವಾದ ಹುಟ್ಟಿಸಿದೆ.

ಈ ಘಟನೆಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಗಂಭೀರವಾಗಿ ಪರಿಗಣಿಸಿ ಕಿಶೋರ್ ಅವರ ವಕೀಲ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. BCI ಪ್ರಕಟಣೆಯಲ್ಲಿ, ಈ ಕೃತ್ಯ “ನ್ಯಾಯಾಂಗದ ಗೌರವಕ್ಕೆ ವಿರುದ್ಧವಾದ ಅಸಹ್ಯ ಕೃತ್ಯ” ಎಂದು ಖಂಡಿಸಿದೆ. ಸುಪ್ರೀಂ ಕೋರ್ಟ್‌ನ ಒಳಗೆ ನಡೆದ ಈ ರೀತಿಯ ಕೃತ್ಯವು ಕೇವಲ ನ್ಯಾಯಾಧೀಶರ ಮೇಲೆ ನಡೆದ ದಾಳಿ ಅಲ್ಲ, ಭಾರತದ ನ್ಯಾಯಾಂಗದ ಮೂಲಭೂತ ಮೌಲ್ಯಗಳ ಮೇಲಿನ ಆಘಾತವೆಂದು ವಕೀಲರ ಸಂಘಟನೆಗಳು ಹೇಳಿವೆ.

ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟಿಸ್ ಈ ಘಟನೆಯನ್ನು “ಪ್ರಜಾಸತ್ತಾತ್ಮಕ ಸಂವೇದನೆಗಳ ಕುಸಿತ” ಎಂದು ಆಘಾತ ವ್ಯಕ್ತಪಡಿಸಿ, ಎಲ್ಲ ವಕೀಲರು ಶಾಂತ ಪ್ರತಿಭಟನೆಗಳ ಮೂಲಕ ನ್ಯಾಯಾಂಗದ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದೆ.

ತೆಲಂಗಾಣದಲ್ಲಿ ಕಲಾಪ ಬಹಿಷ್ಕಾರ

ಪ್ರತಿಭಟನೆಯ ಭಾಗವಾಗಿ ತೆಲಂಗಾಣದ ಹನುಮಕೊಂಡ ಜಿಲ್ಲಾ ವಕೀಲರ ಸಂಘ ಅಕ್ಟೋಬರ್ 7ರಂದು ಕಲಾಪ ಬಹಿಷ್ಕಾರ ನಡೆಸಲು ನಿರ್ಧರಿಸಿದೆ. ಸಂಘದ ಕಾರ್ಯಕಾರಿ ಸಮಿತಿಯು ಸಭೆ ಸೇರಿ “ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ನಡೆದ ದಾಳಿ ಭಾರತೀಯ ನ್ಯಾಯಾಂಗದ ಮೇಲೆ ನಡೆದ ದಾಳಿ” ಎಂದು ಘೋಷಿಸಿ, ಎಲ್ಲ ಸದಸ್ಯರು ಒಂದು ದಿನದ ಕಾಲ ಕೋರ್ಟ್ ಕಾರ್ಯದಿಂದ ದೂರ ಇರಬೇಕೆಂದು ಕರೆ ನೀಡಿದೆ.

ಇದೇ ವೇಳೆ, ‘ತೆಲಂಗಾಣ ನ್ಯಾಯಾಧೀಶರ ಸಂಘ ಕೂಡ ಈ ದಾಳಿಯನ್ನು ಖಂಡಿಸಿ, “ಇಂತಹ ಕೃತ್ಯಗಳು ನ್ಯಾಯಾಂಗದ ಪ್ರಾಮಾಣಿಕತೆಗೆ ಧಕ್ಕೆ ತರುತ್ತವೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯ ಉಂಟುಮಾಡುತ್ತವೆ” ಎಂದು ಹೇಳಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳ ವಕೀಲರ ಸಂಘಗಳೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿವೆ.

ಘಟನೆಯ ನಂತರ ಸಿಜೆಐ ಬಿ ಆರ್ ಗವಾಯಿ ಶಾಂತ ಪ್ರತಿಕ್ರಿಯೆ ನೀಡುತ್ತಾ, “ಈ ರೀತಿಯ ಘಟನೆಗಳಿಂದ ನನ್ನ ಕೆಲಸದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ; ನ್ಯಾಯ ಮತ್ತು ಸಂವಿಧಾನದ ಮಾರ್ಗದಲ್ಲೇ ನಾನು ಮುಂದುವರೆಯುತ್ತೇನೆ” ಎಂದು ಹೇಳಿದ್ದಾರೆ. ಅವರ ಈ ನಿಲುವು ನ್ಯಾಯಾಂಗದ ಶಿಸ್ತು, ತಾಳ್ಮೆ ಮತ್ತು ಪ್ರಜಾಸತ್ತಾತ್ಮಕ ಬದ್ಧತೆಯ ಸಂಕೇತವೆಂದು ಕಾನೂನು ವಲಯ ಪ್ರಶಂಸಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ