Friday, November 20, 2026

ಪ್ರಾಯೋಗಿಕ ಆವೃತ್ತಿ

ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತರಲ್ಲ : ಡಾ.ಕುಮಾರ

ಭಾರತದ ಸಂಸ್ಕೃತಿಯನ್ನು ಉಳಿಸಿರುವ ಮಹರ್ಷಿ ವಾಲ್ಮೀಕಿಯವರು ಜಗತ್ತು ಕಂಡ ಮಹಾನ್ ಚೇತನ, ಮಹರ್ಷಿ ವಾಲ್ಮೀಕಿಯವರು ಕೇವಲ ಒಂದು ಸಮುದಾಯದವರಿಗೆ ಸೀಮಿತವಾದವರಲ್ಲ ಅವರ ತತ್ವ, ಆದರ್ಶ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಡ್ಯ ನಗರದ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿಯವರು ಸಾಮಾನ್ಯರಾಗಿ ಜನಿಸಿ ಅಸಾಮಾನ್ಯವಾಗಿ ಸಾಧನೆ ಮಾಡಿದವರು. ಅವರು ರಚಿಸಿರುವ ಬೃಹತ್ ವಾಲ್ಮೀಕಿ ರಾಮಾಯಣ ಗ್ರಂಥ ಇಂದಿಗೂ ಎಲ್ಲರ ಮನೆ ಹಾಗೂ ಮನಗಳಲ್ಲಿ ಚಿರಪರಿಚಿತ. ಅವರು ಶ್ಲೋಕ ಮತ್ತು ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಜೀವನದ ಮೌಲ್ಯ ಮತ್ತು ಮಾನವೀಯತೆಯನ್ನು ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.

ಭಾರತದ ಬೃಹತ್ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣ ಸೂರ್ಯ- ಚಂದ್ರ ಇರುವವರೆಗೂ ಶಾಶ್ವತ. ವಾಲ್ಮೀಕಿಯವರು ತಮ್ಮ ಕೃತಿಯಲ್ಲಿ ಮಾನವೀಯತೆ, ರಾಮರಾಜ್ಯ ಮತ್ತು ಪ್ರಜಾರಾಜ್ಯ ಕುರಿತಂತೆ ಪ್ರತಿಯೊಂದು ವಿಷಯಗಳ ಬಗ್ಗೆಯೂ ತಿಳಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹಿರಿಯರು ಇಂದಿನ ನಮ್ಮ ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ರಾಮಾಯಣದ ಮಹತ್ವವನ್ನು ತಿಳಿಸಿ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ  ಮಾತನಾಡಿ ಅಕ್ಷರ ಜ್ಞಾನವಿದ್ದರೆ ಯಾರು ಯಾವ ಸಾಧನೆ ಬೇಕಾದರೂ ಸಾಧಿಸಬಹುದು ಹಾಗೂ ಸಮಾಜಕ್ಕೆ ಮಾದರಿಯಾಗಿ ಎಂದಿಗೂ ಅಳಿಯದ ಹೆಸರಾಗಿ ಉಳಿಯಬಹುದು ಎಂಬುವುದಕ್ಕೆ ಮಹರ್ಷಿ ವಾಲ್ಮೀಕಿಯವರು ನಿದರ್ಶನ. ಮಹರ್ಷಿ ವಾಲ್ಮೀಕಿಯವರ ಜಯಂತಿ ಅಂಗವಾಗಿ ಜಿಲ್ಲೆಯಲ್ಲಿನ ಪ್ರತಿ ಮಕ್ಕಳಿಗೂ ವಿದ್ಯಾಭ್ಯಾಸವನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಬ್ಬರು ಹೆಚ್ಚಿನ ಪಾತ್ರ ನಿಭಾಯಿಸುತ್ತೇವೆ ಎಂದು ಸಂಕಲ್ಪ ಮಾಡಿ ಎಂದು ಹೇಳಿದರು.

ಶ್ರೀರಂಗಪಟ್ಟಣದ ವಿದ್ಯಾಭಾರತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಎಂ. ಆರ್ ಮಾತನಾಡಿ ಪ್ರಸ್ತುತ ನಾವು ವಿದ್ಯಾವಂತರಾಗಿ ಸಮಾಜದಲ್ಲಿ ಜೀವನ ಸಾಗಿಸುತ್ತಿದ್ದು ಮಹರ್ಷಿ ವಾಲ್ಮೀಕಿಯವರನ್ನು ಒಂದು ಸಮುದಾಯಕ್ಕೆ ಸೀಮಿತ ಪಡಿಸುತ್ತಿರುವುದು ವಿಪರ್ಯಾಸದ ಸಂಗತಿ. ದೇಶದ ಮಹಾನ್ ವ್ಯಕ್ತಿಗಳನ್ನು ಕೇವಲ ಒಂದು ಜನಾಂಗ ಮತ್ತು ಸಮುದಾಯಕ್ಕೆ ಸೀಮಿತ ಪಡಿಸದೆ, ಅವರ ಆದರ್ಶ, ತತ್ವ ಹಾಗೂ ಪರೀತ್ಯಾಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿಬೇಕು ಎಂದು ತಿಳಿಸಿದರು.

ಬಳಿಕ ಎಸ್. ಎಸ್.ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಸಾಧಕರನ್ನು ಮತ್ತು ಅಥಿತಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ ಪ್ರಕಾಶ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ಶ್ರೀನಿವಾಸ್, ನಗರಸಭೆ ಸದಸ್ಯರಾದ ಶ್ರೀಧರ್, ಹರೀಶ್, ಶಿವಲಿಂಗು, ಡಿ. ದೇವರಾಜು ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ಸಮುದಾಯ ಮುಖಂಡರುಗಳಾದ ಚಂದ್ರನಾಯಕ್, ವೆಂಕಟೇಶ್ ನಾಯಕ್ ಸೇರಿದಂತೆ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ