ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದಿಂದ ‘ಎದ್ದೇಳು ಕನ್ನಡಿಗ- ಕೆಆರ್ಎಸ್ ಪಕ್ಷ ಸೇರು ಬಾ’ ಘೋಷವಾಕ್ಯದೊಂದಿಗೆ ಅ.6ರಿಂದ 16ವರೆಗೆ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಪಕ್ಷವು ರಾಜ್ಯದಲ್ಲಿ ಜನರ ಪ್ರೀತಿ, ವಿಶ್ವಾಸಗಳಿಸುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವ ಪಡೆಯಲು ಮುಂದಾಗುತ್ತಿದ್ದು, ಪಕ್ಷವನ್ನು ಬಲಪಡಿಸಿ ಜನರ ಬಳಿಗೆ ಕೊಂಡೊಯ್ಯಲು ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ ಎಂದರು.
‘ಎದ್ದೇಳು ಕನ್ನಡಿಗ, ಸಮೃದ್ದ ಕರ್ನಾಟಕ ಕಟ್ಟಲು- ಕೆಆರ್ಎಸ್ ಪಕ್ಷ ಸೇರು ಬಾ, ಶಕ್ತಿ -ಚೈತನ್ಯ ಪಡೆಯಲು’ ಹೆಸರಿನಲ್ಲಿ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್ ಅವರು ಅ.6ರಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ರಾಜ್ಯ ಕರ್ಯಾಧ್ಯಕ್ಷ ರಘು ಜಾಣಗೆರೆ, ರಾಜ್ಯ ಪಾಧ್ಯಕ್ಷರಾದ ಎಸ್.ಮಂಜುನಾಥ್, ಕೆ.ಎಸ್.ಸೋಮಸುಂದರ್ ನೇತೃತ್ವದಲ್ಲಿ ಮೂರು ತಂಡಗಳಾಗಿ ರಾಜ್ಯಾದ್ಯಂತ ಸಂಚರಿಸಿ ಸದಸ್ಯತ್ವ ನೋದಣಿ ಮಾಡಲಾಗುವುದು ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ರಘು ಜಾಣಗೆರೆ ನೇತೃತ್ವದ ತಂಡ ಈಗಾಗಲೇ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಅಭಿಯಾನ ನಡೆಸಿದ್ದು, ಕೋಲಾರ, ಬೆಂಗಳೂರು ದಕ್ಷಿಣ ಜಿಲ್ಲೆಗಳ ಮೂಲಕ ಅ.10ರಂದು ಮಂಡ್ಯ, 11ರಂದು ಚಾಮರಾಜನಗರ, 13ರಂದು ಮೈಸೂರು, 14ರಂದು ಕೊಡಗು, 15ರಂದು ದಕ್ಷಿಣ ಕನ್ನಡ, 16ರಂದು ಉಡುಪಿ ಜಿಲ್ಲೆಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲಿದೆ. ಅಭಿಯಾನ ಅವಧಿ ಮುಗಿದ ನಂತರ ಚರ್ಚಿಸಿ ನವೆಂಬರ್ ತಿಂಗಳಿನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಕರ್ಯದರ್ಶಿ ಎಚ್.ಇ.ಯೋಗೀಶ್, ರೈತ ಘಟಕ ಅಧ್ಯಕ್ಷ ಜಿ.ಕೆ.ರಾಜು, ರೈತ ಘಟಕ ಪ್ರಧಾನ ಕಾರ್ಯದರ್ಶಿ ಹರೀಶ್ ಕಂಪಲಾಪುರ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಪಿಕಾ, ಮಂಡ್ಯ ತಾಲೂಕು ಉಪಾಧ್ಯಕ್ಷ ಎಸ್.ಜಗದೀಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಮಾದೇಗೌಡ ಇದ್ದರು.




