ಕರ್ನಾಟಕ ರಾಜ್ಯ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ವಾದಿ ಸಂಘ-ಸಂಸ್ಥೆಗಳು ಮತ್ತು ವಿಶ್ವಮೈತ್ರಿ ಬುದ್ಧವಿಹಾರದ ಸಂಯುಕ್ತಾಶ್ರಯದಲ್ಲಿ ಅ.14, 15ರಂದು ಬೆಳಿಗ್ಗೆ 10.30ಕ್ಕೆ ಬೌದ್ಧ ಮಹಾಸಮ್ಮೇಳನವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶಿವರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮದ ಮೂಲಕ ಮಾನವ ಮೈತ್ರಿಯ ಪಯಣ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಬೌದ್ಧ ಬಿಕ್ಕುಗಳನ್ನು ಗೌರವಿಸಲಾಗುತ್ತಿದೆ ಎಂದರು.
ಧಾನ್ಯ, ಚಿಂತನೆ ಮತ್ತು ವಿಚಾರಗಳನ್ನೊಳಗೊಂಡ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಅ.14ರ ಮೊದಲ ದಿನ ದೇಶದ ವಿವಿಧ ಭಾಗಗಗಳಿಂದ ಆಗಮಿಸುವ 200ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಬೋಧನೆ ನಡೆಯಲಿದೆ. ಇದೇ ವೇಳೆ ಸ್ವಇಚ್ಛೆಯಿಂದ ಧಮ್ಮಸ್ವೀಕಾರ ಮಾಡುವವರಿಗೆ ದೀಕ್ಷೆ ನೀಡಲಾಗುವುದು ಎಂದು ಹೇಳಿದರು.
ಅ.15ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹಲವು ಮಂತ್ರಿಗಳು ಭಾಗವಹಿಸಲಿದ್ದಾರೆ. ಬೌದ್ಧ ಧಮ್ಮಕ್ಕೆ ರಾಜಕೀಯ ಆಶ್ರಯದ ಶಾಂತಿ ಸಂದೇಶವನ್ನು ನೀಡಲಾಗುವುದು. ಬೌದ್ಧ ಸಂದೇಶದ ಜೊತೆಗೆ ಕವಿಗೋಷ್ಠಿಯು ನಡೆಯಲಿದೆ. ಇದೇ ವೇಳೆ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸಮ್ಮೇಳನದಲ್ಲಿ 4 ಸಮಾನಾಂತರ ವೇದಿಕೆ ರೂಪಿಸಲಾಗುವುದು. 30ಕ್ಕೂ ಹೆಚ್ಚು ಬೌದ್ಧಧಮ್ಮ ಪರಿಣಿತರು ಭಾಗಿಯಾಗುವರು. ಸಮ್ಮೇಳನದಲ್ಲಿ 5 ಲಕ್ಷಕ್ಕೂ ಹೆಚ್ಚು ಬೌದ್ಧ ಅನುಯಾಯಿಗಳು ಭಾಗವಹಿಸುವ ನಿರೀಕ್ಷಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಹೆಚ್.ಎನ್.ನರಸಿಂಹಮೂರ್ತಿ, ಮಹದೇವು, ಹುರುಗಲವಾಡಿ ರಾಮಯ್ಯ, ಎಸ್.ಪಿ. ನಾರಾಯಣಸ್ವಾಮಿ, ವೆಂಕಟೇಶ್, ಗುರುಮೂರ್ತಿ, ಉಮೇಶ್ ಇತರರಿದ್ದರು.




