Wednesday, September 11, 2024

ಪ್ರಾಯೋಗಿಕ ಆವೃತ್ತಿ

ಮದ್ದೂರಿನಲ್ಲಿ ದನಗಳ ಜಾತ್ರೆ : ಪಟ್ಡಣದಲ್ಲೀಗ ಜೀವಕಳೆ

ನ.ಲಿ.ಕೃಷ್ಣ. ಕೃಷಿಕರು, ಸಾಮಾಜಿಕ ಕಾರ್ಯಕರ್ತರು.

ಕೊರೊನಾ, ಅದಕ್ಕೂ ಮೊದಲು ಬರ, ರಾಸುಗಳ ಖಾಯಿಲೆ ಕಾರಣ ದಿಂದ ಹಲವು ವರ್ಷಗಳಿಂದ ನಿಂತು ಹೋಗಿದ್ದ ದನಗ಼ಳ ಜಾತ್ರೆ ಈ ಬಾರಿ ಆರಂಭಗೊಂಡಿದೆ. ಮದ್ದೂರು ಪಟ್ಟಣದ ಪೇಟೆ ಬೀದಿಯ ಇಕ್ಕೆಲೆಗಳಲ್ಲಿ ದನಗಳ ಗೊಂತು ನಿರ್ಮಿಸಿ ರೈತರು ತಮ್ಮ ರಾಸುಗಳನ್ನು ಕಟ್ಟಿದ್ದಾರೆ. ಹವ್ಯಾಸಕ್ಕಾಗಿ ಜಾನುವಾರುಗಳ ಮೇಲಿನ ಪ್ರೀತಿಗಾಗಿ ಜಾನುವಾರುಗಳನ್ನು ಸಾಕುವವರು ಈ ಜಾತ್ರೆಗೆ ಹೆಚ್ಚಿನ ಆಕರ್ಷಣೆ ತಂದಿದ್ದಾರೆ.

ತಮ್ಮ ಬೆಲೆ ಬಾಳುವ ರಾಸುಗಳನ್ನು ಕಟ್ಟಲು ಮದುವೆ ಚಪ್ಪರ ಮೀರಿಸುವ ಬಣ್ಣ ಬಣ್ಣದ ಚಪ್ಪರ ಹಾಕಿದ್ದಾರೆ. ನೆಲಕ್ಕೆಕೂಡ ಮೆತ್ತನೆಯ ಹುಲ್ಲು ಹಾಸು ಕೂಡ ಸಜ್ಜುಗೊಳಿಸಿ ತಮ್ಮ ನೆಚ್ವಿನ ರಾಸುಗಳನ್ನು ಕಟ್ಟಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳಿಗೆ ಬೇಸಿಗೆ ರಜೆ, ಪಾಲಕರಿಗೆ ಸಾಲು ಸಾಲು ರಜೆ ಸಿಕ್ಕ ಕಾರಣ, ತಮ್ಮ ಮಕ್ಕಳೊಟ್ಟಿಗೆ ಪೇಟೆಯ ಜನ ಜಾತ್ರೆಗೆ ಬಂದು ರಾಸುಗಳನ್ನು ನೋಡಿ ತಮ್ಮ ಮೊಬೈಲ್ನಲ್ಲಿ ಪೊಟೊ ತೆಗೆದು ಜಾನುವಾರುಗಳ ಮೈದೊಡವಿ ಖುಷಿಪಡುತ್ತಿದ್ದಾರೆ.

ಹತ್ತಾರು ಲಕ್ಷ ಬೆಲೆಬಾಳುವ ರಾಸುಗಳು ದಿನಂ ಪ್ರತಿ ಅದರ ಹಾರೈಕೆಗೆ ಸಾವಿರಾರು ರೂ ಖರ್ಚುಮಾಡುವ ರೈತರು ಜಾತ್ರೆಯಲ್ಲಿ ಜನರು ತಮ್ಮ ರಾಸುಗಳನ್ನು ಕಂಡು ಕಣ್ಣರಳಿಸುವುದನ್ನ ಕಂಡು ಸ್ವತಃ ಪುಳಕಗೊಳ್ಳುತ್ತಿದ್ದಾರೆ. ವರ್ಷವೀಡಿ ರಾಸುಗಳ ಪಾಲನೆ ಮಾಡಿದ ಕಷ್ಢ ಮರೆತು ಸಾರ್ಥಕ ಭಾವ ಹೊಂದುತ್ತಿದ್ದಾರೆ. ಹೀಗೆ ಮದ್ದೂರು ಪಟ್ಟಣವಿಡೀ ಜಾತ್ರೆಯ ಕಾರಣಕ್ಕೆ ಜೀವಕಳೆ ಪಡೆದಿದೆ.

ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆ ಈ ವರ್ಷದ ಕೊನೆಯ ಜಾತ್ರೆಯು ಹೌದು

ಸಂಕ್ರಾಂತಿಯ ಮರುದಿನ ಚನ್ನಪಟ್ಟಣದ ಕೆಂಗಲ್ ನಲ್ಲಿ ನಡೆಯುವ ಜಾತ್ರೆ ಮೊದಲಿನದು. ನಂತರ ಬಸವಣ್ಣನ ಜಾತ್ರೆ, ಹನುಮಂತನಗರ ಜಾತ್ರೆ ಬೇಬಿ ಜಾತ್ರೆ, ಮುಡುಕು ತೊರೆ ಜಾತ್ರೆ ಹೀಗೆ ಸುಗ್ಗಿಯ ನಡುವೆ ನಡೆಯುವ ಜಾತ್ರೆಗಳ ಪೈಕಿ ಸುಗ್ಗಿ , ಒಕ್ಕಣೆ ಎಲ್ಲಾ ಮುಗಿದ ಮೇಲೆ ಬರುವ ಕೊನೆಯ ಜಾತ್ರೆ ಇದು.

ಆ ಕಾರಣಕ್ಕೆ ಮದ್ದೂರು ಜಾತ್ರೆಗೆ ವಿಶೇಷತೆ ಇದೆ. ಬೆಸಿಗೆ ಕಳೆದು ಮುಂಗಾರು ಆರಂಭಗೊಳ್ಳುವ ಹೊತ್ತಿಗೆ ಈ ಜಾತ್ರೆ ಆರಂಭ ಆಗುತ್ತದೆ.
ಹಿಂದಿನ ಜಾತ್ರೆಗಳಲ್ಲಿ ತಮ್ಮ ರಾಸು ಮಾರಿದ್ದವರಿಗೆ ಮುಂಗಾರು ಆರಂಭದೊಂದಿಗೆ ತಮ್ಮ ಕೃಷಿ-ಕಾಯಕ ಆರಂಬಿಸಬೇಕಾಗಿರುವುದರಿಂದ ಜಾನುವಾರುಗಳನ್ನು ಕೊಳ್ಳಲೆಬೇಕಾಗಿರುತ್ತದೆ. ಇದರಿಂದ ಈ ಜಾತ್ರೆಯಲ್ಲಿ ಕೊಂಡು ಕೊಳ್ಳುವಿಕೆಯು ಜೋರಾಗಿಯೇ ನಡೆಯಲಿದೆ. ಹಿಂದೆಲ್ಲಾ ಹುಬ್ಬಳ್ಳಿ ದಾರವಾಡಗಳಿಂದ ರೈತರು ಮದ್ದೂರು ಜಾತ್ರೆಯಲ್ಲಿ ರಾಸುಕ್ಕೊಳ್ಳಲು ಬರುತ್ತಿದ್ದರು. ಕಚ್ಚೆಯವರು (ಹುಬ್ಬಳ್ಳಿ-ಧಾರವಾಡದವರು) ಜಾತ್ರೆಗೆ ಬಂದರೆಂದರೆ ವ್ಯಾಪರ ಬೆಲೆ ಬಿರುಸುಗೊಳ್ಳುತ್ತಿದ್ದವು. ರಾಮನಗರ ಸೇರಿದಂತೆ ಬೆಂಗಳೂರು ಗ್ರಾಮಂತರ, ತುಮಕೂರು ಭಾಗದಿಂದಲು ಹೀಗಲೂ ರೈತರು ಈ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಜಾತ್ರೆಗೆ ಮುನ್ನ ಮಳೆ ಆರಂಭವಾಗಿರುವುದು ಮತ್ತಷ್ಟು ಹುರುಪು ತಂದಿದೆ

ಬದುಕು ಯಾಂತ್ರಿಕ ಗೊಂಡಿರುವುದು ಮತ್ತು ಕೃಷಿಯು ನಷ್ಠದ ಬಾಬತ್ತು ಆಗಿರುವ ಕಾರಣ ಕೃಷಿಗೆ ಜಾನುವಾರು ಬಳಕೆ ಕಡಿಮೆ ಆಗಿದೆ. ಆದ್ದರಿಂದ ಮದ್ದೂರಮ್ಮನ ಜಾತ್ರೆಯಲ್ಲಿ ಹಿಂದಿನ ವರ್ಷಗಳಲ್ಲಿ ಮದ್ದೂರು ಪಟ್ಟಣವನ್ನೆಲ್ಲಾ ಆವರಿಸುತ್ತಿದ್ದ ಪ್ರಮಾಣದಲ್ಲಿ ಜಾನುವಾರುಗಳು ಇಲ್ಲಾವಾದರೂ ಜಾತ್ರೆಯ ಹುರುಪು ಮತ್ತು ಹುಮ್ಮಸ್ಸು ಒಂದಿಷ್ಟೂ ಕಡಿಮೆ ಆಗಿಲ್ಲಾ.

ಮೂಲಸೌಕರ್ಯಗಳ ಕೊರತೆ :

  1. ಪೇಟೆ ಬೆಳೆದಂತೆ ಪಟ್ಟಣದ ನಡುವೆ ಇದ್ದ ಖಾಲಿಜಾಗ ಇಲ್ಲಾವಾದ್ದರಿಂದ, ಜಾನುವಾರುಗಳನ್ನು ಪೇಟೆ ಬೀದಿಯ ಅಂಗಡಿ ಮುಂಗಟ್ಟುಗಳ ಮುಂದೆ ಇಕ್ಕಟ್ಟಾದ ಜಾಗದಲ್ಲೇ ಕಟ್ಟಬೇಕಾಗಿದೆ.
  2. ಅದಕ್ಕಾಗಿ ಮದ್ದೂರು ದನಗಳ ಜಾತ್ರೆಗೆ ಪ್ರತ್ಯೇಕವಾದ ಜಾಗ ಗುರುತಿಸಿ ಅಲ್ಲಿ ನಿರುಮ್ಮಳವಾಗಿ ರೈತರು ಜಾತ್ರೆ ನಡೆಸಲು ಅನುಕೂಲ ಮಾಢಿಕೊಡಬೇಕಿದೆ.
  3. ಪೇಟೆ ಬೀದಿಯಲ್ಲಿ ಅಂಗಡಿ ಮುಂಗಟ್ಟು ಸಂಜೆ ವೇಳೆ ಮುಚ್ಚಿದ ಮೇಲೆ ಬೆಳಕಿನ ವ್ಯವಸ್ಥೆಯು ಕ್ಷೀಣಿಸುತ್ತದೆ. ಅದಕ್ಕಾಗಿ ತಾತ್ಕಾಲಿಕವಾಗಿ ಬೆಳಕಿನ ವ್ಯವಸ್ಥೆಯು ಆಗಬೇಕಾಗಿದೆ. ಸದ್ಯ ದಾನಿಗಳು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಜಾನುವಾರು, ಸುಂಕ ಗೊಬ್ಬರ, ಸುಂಕ ಅಂಗಡಿಗಳ ಮೇಲಿನ ಸುಂಕದ ಹರಾಜು ಮಾಡಿ, ಹಣ ಪಡೆಯುವ ಕೆಲಸಕ್ಕಷ್ಠೆ ಪುರಸಭೆಯು ಸಿಮೀತಗೊಳ್ಳದೆ, ಜಾನುವಾರುಗಳಿಗೆ ರೈತರಿಗೆ ನಾಗರೀಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ತಾಲ್ಲೂಕು ಆಡಳಿತ ಕೂಡಾ ಜಾನುವಾರು ಜಾತ್ರೆಗೆ ಬಂದಿರುವ ರೈತರ ಮತ್ತು ಅವರ ಜಾನುವಾರುಗಳ ಯೋಗಕ್ಷೇಮದ ಕುರಿತು ಗಮನಹರಿಸಬೇಕಾಗಿದೆ.

ಎ. ಪಿ. ಎಮ್. ಸಿ. ಯಿಂದ ಉತ್ತಮ ಜಾನುವಾರುಗಳಿಗೆ ಬಹುಮಾನ:

ಎ.ಪಿ.ಎಮ್. ಸಿ. ಯಿಂದ ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಣೆ ಪ್ರತಿ ವರ್ಷದಂತೆ ಈ ವರ್ಷವೂ ಇದೆಯಾದರು, ಜಾನುವಾರುಗಳು ಜಾತ್ರೆಯಲ್ಲಿ ಇರುವಾಗಲೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಬೇಕು. ಪ್ರತಿಬಾರಿ ಜಾನುವಾರುಗಳ ಜಾತ್ರೆ ನಡೆದಾಗಲು, ಸ್ಪರ್ದಿಸಿ ಗೆದ್ದತಂಹ ಜಾನುವಾರಗಳ ಹೆಸರು,ಊರು ಮತ್ತು ಮಾಲೀಕರ ಹೆಸರನ್ನು ಜಾತ್ರೆ ನಡೆಯುವ ಸಂದರ್ಭದಲ್ಲೇ ಪಕ್ರಟಿಸಬೇಕು, ಜಾತ್ರೆನಡುವೆ ಒಂದು ಸಣ್ಣ ಕಾರ್ಯಕ್ರಮ ಮಾಡಿ ಬಹುಮಾನ ವಿತರಿಸಿದರೆ, ಸ್ಪರ್ಧಿಸಿದಂತಹ ಎಲ್ಲರಿಗೂ ಒಂದು ಗೌರವವು ಸಿಗುತ್ತದೆ ಮತ್ತು ಖುಷಿಯು ಆಗುತ್ತದೆ. ಮುಖ್ಯವಾದ ವಿಚಾರವೆಂದರೆ, ಜಾತ್ರೆಯಲ್ಲಿ ಯಾರು ಗೆದ್ದರು, ಯಾವ ಬಹುಮಾನುಗಳು ಬಂದವು ಎಂದು ಎಲ್ಲರಿಗೂ ಜಾತ್ರೆಯು ನಡೆಯುವ ಸಂದರ್ಭದಲ್ಲೆ ಗೊತ್ತಾಗಬೇಕು. ಈ ರೀತಿಯ ಬದಲಾವಣೆ ಆಗಬೇಕು ಎನ್ನುವುದು ರೈತರ ಬಹುವರ್ಷದ ಬೇಡಿಕೆಯಾಗಿದೆ.

ಇದನ್ನೂ ಓದಿ : ಕೊಡಗಿನಿಂದ ಬಂದ ಶಕ್ತಿದೇವತೆ ಮದ್ದೂರಮ್ಮನ ಕೊಂಡೋತ್ಸವ: ಸಿಡಿ- ಜಾತ್ರೆ ಭಕ್ತಿಭಾವಗಳ ಸಂಗಮ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!