ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಬಸವನಹಳ್ಳಿ ಮಾಲ್ದಾರೆ ಭಾಗದಲ್ಲಿ ಸಾಮಾಜಿಕ, ಆರ್ಥಿಕ ಜಾತಿಗಣತಿ ಕರ್ತವ್ಯ ನಿರತವಾಗಿದ್ದ ಗೊಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ಶಿವರಾಂರವರು ಬೈಕ್ ನಲ್ಲಿ ಗಣತಿ ಮಾಡುತ್ತಾ ಒಂದು ವಸತಿ ಪ್ರದೇಶದಿಂದ ಮತ್ತೊಂದು ವಸತಿ ಪ್ರದೇಶದತ್ತಾ ತೆರಳುವಾಗ ಆನೆಯೊಂದು ದಾಳಿಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ನೌಕರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಕಳವಳ ವ್ಯಕ್ತಪಡಿಸಿದೆ.
ರಸ್ತೆಯನ್ನು ಅಡ್ಡಲಾಗಿ ದಾಟುವ ಸಂದರ್ಭದಲ್ಲಿ ಬೈಕನ್ನು ಗಮನಿಸಿ, ಆನೆಯೊಂದು ಗಾಬರಿಯಿಂದ ಘೀಳಿಡುತ್ತಾ ಕಿರುಚುತ್ತಾ ನೌಕರನತ್ತಾ ಧಾವಿಸಿದೆ. ಆಗ ಗಾಬರಿಗೊಂಡ ಶಿಕ್ಷಕ, ಬೈಕ್ ಬಿಟ್ಟು ಓಡುವ ಸಂದರ್ಭದಲ್ಲಿ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ತವ್ಯ ನಿರತ ಶಾಲಾ ವ್ಯಾಪ್ತಿಯನ್ನು ಬಿಟ್ಟು ಬೇರೆ ಭಾಗಗಳಲ್ಲಿ ಕಾರ್ಯನಿರ್ವಹಿಸಲು ಗಣತಿಗೆ ನಿಯೋಜಿಸಿದ್ದರಿಂದ, ಸರಿಯಾಗಿ ಭೌಗೋಳಿಕ ಪ್ರದೇಶದ ಪರಿಚಯ ಇಲ್ಲದಿರುವ ಕಾರಣ ಈ ಅಪಾಯ ಸಂಭವಿಸಿದೆ ಎಂದು ರಾಜ್ಯ ಸಂಘದ ಉಪಾಧ್ಯಕ್ಷ ಶಿವಣ್ಣಮಂಗಲ ದೂರಿದ್ದಾರೆ.
ಅರಣ್ಯ ಅಂಚಿನಲ್ಲಿ ಸಾಮಾಜಿಕ ಮತ್ತು ಅರ್ಥಿಕ, ಜಾತಿ ಗಣತಿ ಕಾರ್ಯ ಮಾಡುವ ಸಿಬ್ಬಂದಿಗಳೊಂದಿಗೆ ಅರಣ್ಯದ ಇಲಾಖೆಯ ಸಿಬ್ಬಂದಿಗಳನ್ನು ಜೊತೆಗೆ ನಿಯೋಜಿಸಬೇಕಿತ್ತು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿ ಗಣತಿದಾರರೊಂದಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸಮಾಡಬೇಕಿತ್ತು. ಆದರೆ ಅರಣ್ಯ ಇಲಾಖೆಯಿಂದ ಯಾವುದೇ ಸಿಬ್ಬಂದಿಯನ್ನು ಗಣತಿದಾರನ ಮಾರ್ಗದರ್ಶಕನಾಗಿ ನಿಯೋಜನೆ ಮಾಡಿಲ್ಲ. ಇಂತಹ ಅಪಘಾತ, ಅವಘಡಗಳ ಸಂದರ್ಭದಲ್ಲಿ ಖಾಸಗಿ ಅನುದಾನಿತ ನೌಕರರಿಗೆ ಸರ್ಕಾರಿ ಸಿಬ್ಬಂದಿಗಳಿಗೆ ಇರುವ ಹಾಗೆ ಯಾವುದೇ ಆರೋಗ್ಯ ವಿಮಾ ಯೋಜನೆಗಳನ್ನು ಸರ್ಕಾರ ಈವರೆಗೂ ಜಾರಿಗೊಳಿಸದ ನಿಟ್ಟಿನಲ್ಲಿ “ಜೋತಿ ಸಂಜೀವಿನಿ” ಯೋಜನೆಯನ್ನು ಅನುದಾನಿತ ನೌಕರರಿಗೂ ಆದಷ್ಟು ಶೀಘ್ರದಲ್ಲಿ ವಿಸ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಗಾಯಗೊಂಡು ನೌಕರನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಪಡಿಞರಂಡ ಪ್ರಭುಕುಮಾರ್, ಕಾರ್ಯದರ್ಶಿಗಳಾದ ನಾಗರಾಜ್, ವಿರಾಜಪೇಟೆ ತಾಲೂಕು ಅನುದಾನಿತ ನೌಕರರ ಘಟಕದ ಅಧ್ಯಕ್ಷ ಗಿಡ್ಡಯ್ಯ, ಸಹಕಾರ್ಯದರ್ಶಿ ಗುಡದಪ್ಪ ಹಾಜರಿದ್ದರು.




