ಮದ್ದೂರು ತಾಲೂಕಿನ ಸಾವಿರಾರು ಎಕರೆ ಪ್ರದೇಶಗಳಿಗೆ ನೀರು ಹರಿಯುವ ಕೆಆರ್ ಎಸ್ ಕೊನೆ ಭಾಗದ ನಾಲೆಗಳಿಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ಅವರು ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದರು.
ಕೆಆರ್ ಎಸ್ ಕೊನೆ ಭಾಗದ ನಾಲೆಗಳಾದ ಕೊಪ್ಪ, ಕೌಡ್ಲೆ, ಕಿರಂಗೂರು, ಅಬಲವಾಡಿ, ಹೊಸಗಾವಿ ಸೇರಿದಂತೆ ಹಲವು ಭಾಗಗಳಿಗೆ ಭೇಟಿ ನೀಡಿ ನಾಲೆಗಳ ಸ್ಥಿತಿಗತಿ ಪರಿಶೀಲಿಸಿದರು. ನಾಲೆಗಳ ಆಧುನೀಕರಣ ಹಾಗೂ ನಾಲೆಯ ಕೊನೆಯ ಹಂತದವರೆಗೆ ನೀರು ಹರಿಸುವ ಸಂಬಂಧ ರೈತರೊಂದಿಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ವರ್ಷಕ್ಕಿಂತ ಈ ವರ್ಷ ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ. ಈ ವರ್ಷ ಜಿಲ್ಲೆಯಲ್ಲಿ 1,92,103 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು 1,96,478 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ವಿಸ್ತೀರ್ಣ 12,817 ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದೆ ಎಂದರು.
ಕೊನೆ ಭಾಗದ ನಾಲೆಗಳಿಗೆ 285 ಕ್ಯೂಸೆಕ್ ನೀರು ಬರುತ್ತಿದೆ. ಕಾವೇರಿ ಜಲಾನಯನ ಪ್ರದೇಶ ಹಾಗೂ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕೊರತೆಯಿಂದ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದರು.
ಕೃಷಿ ಚಟುವಟಿಕೆಗಳಿಗಾಗಿ ಜಿಲ್ಲಾ ಸಹಕಾರ ಬ್ಯಾಂಕ್ ನಿಂದ 30.9.2025ರ ಅಂತ್ಯಕ್ಕೆ 38 ಸಾವಿರ ರೈತರಿಗೆ 338 ಕೋಟಿ ರೂ.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ರೈತರಿಗೆ ಸಮರ್ಪಕವಾದಂತಹ ಬಿತ್ತನೆ ಬೀಜ, ರಸಗೊಬ್ಬರವನ್ನು ಹಾಗೂ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ರೈತರ ಅಗತ್ಯಕ್ಕೆ ತಕ್ಕಂತೆ ಕಲ್ಪಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಭೇಟಿ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಇಂಜಿನಿಯರ್ ರಘುರಾಮ್, ಎಕ್ಸಿಕ್ಯೂಟಿವ್ ಇಂಜಿನಿಯರ್ ನಂಜುಂಡೇಗೌಡ, ಕೊಪ್ಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ರಾಘವೇಂದ್ರ, ಕೆರಗೋಡು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಜಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಿವಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ತಾಪಂ ಮಾಜಿ ಸದಸ್ಯ ರಘು, ಕುಮಾರ್ ಕೊಪ್ಪ ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಜೊತೆಯಲ್ಲಿದ್ದರು.
ಕೆರೆಗಳಿಗೆ ಕಾಯಕಲ್ಪ
ಮೊದಲು ಕೆರೆ ತುಂಬಿ ನದಿಗೆ ನೀರು ಹರಿಯುತ್ತಿತ್ತು. ಆದರೀಗ ನದಿಯಿಂದ ಕೆರೆಗೆ ನೀರು ಹರಿಸುವಂತಾಗಿದೆ. ಈ ಕ್ರಮ ಸರಿಪಡಿಸಲು ಕೆರೆಗಳ ಕಾಯಕಲ್ಪ ಅತ್ಯವಶ್ಯಕ ಎಂದು ದಿನೇಶ್ ಗೂಳಿಗೌಡ ಅವರು ಹೇಳಿದರು. ಮಂಡ್ಯ ಜಿಲ್ಲೆಯಲ್ಲಿ 962 ಕೆರೆಗಳಿವೆ. ಇವುಗಳಲ್ಲಿ ಕಾವೇರಿ ಜಲಾನಯನ ಭಾಗದ 174 ಕೆರೆಗಳ ಕಾಯಕಲ್ಪ ಮಾಡಬೇಕಿದೆ. ಕೆರೆಗಳ ಒತ್ತುವರಿ ತೆರವು, ಮಣ್ಣು ತೆಗೆಯದಂತೆ ನೋಡಿಕೊಳ್ಳಬೇಕಿದೆ. ಈ ಎಲ್ಲಾ ಅಂಶಗಳನ್ನು ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ಗಮನಕ್ಕೆ ತಂದು ಈ ಭಾಗದ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಎಲ್ಲೆಲ್ಲಿ ಭೇಟಿ?
ಮದ್ದೂರು ತಾಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲಾಯಿತು. ಕೆ.ಜಿ. ಕೊಪ್ಪಲು, ಸೋಮನಹಳ್ಳಿ, ಕೆ.ಎಚ್. ಕೊಪ್ಪಲು, ಕಿರಂಗೂರು ಕಳ್ಳಿಕೊಪ್ಪಲು, ತರೀಕೆರೆ, ಮಾರಂಗೆರೆ, ಚಿಕ್ಕ ಹೊಸಗಾವಿ, ಕೌಡ್ಲೆ, ಅಬಲವಾಡಿ, ಹೊಸಗಾವಿ ಬೆಕ್ಕಳಲೆ, ಗಟ್ಟಳ್ಳಿ, ಹಳೆಹಳ್ಳಿ ಭಾಗದ ನಾಲೆಗಳನ್ನು ವೀಕ್ಷಿಸಿ ಅಗತ್ಯ ಕ್ರಮಗಳ ಕುರಿತು ರೈತರೊಂದಿಗೆ ಚರ್ಚಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿರವರ ಸೂಚನೆ
ನಾಲೆಗಳ ಪಕ್ಕದಲ್ಲಿ ಬೆಳೆದಿರುವ ಗಿಡಗಂಟೆ ತೆರವು ಮಾಡಿ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ನಾಲೆ ಪಕ್ಕದ ರಸ್ತೆಗಳ ದುರಸ್ತಿ ಮಾಡಬೇಕು. ನಾಲೆಗಳ ಕೆಲಭಾಗಗಳಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡುವುದರ ಜೊತೆಗೆ 18 ತೋಬುಗಳನ್ಬು ಹೊಸದಾಗಿ ನಿರ್ಮಿಸಲಾಗುವುದು. ಕೆರೆ ನಾಲೆಗಳ ದುರಸ್ತಿ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂದು ರೈತರಿಗೆ ದಿನೇಶ್ ಗೂಳಿಗೌಡ ಅವರು ಹೇಳಿದರು.
ಸಕಾಲದಲ್ಲಿ ರಸಗೊಬ್ಬರ ಪೂರೈಕೆ
ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಲು ಅಧಿಕಾರಿಗಳಿಗೆ ಕೃಷಿ ಸಚಿವರಾದ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ. ಈಗಾಗಲೇ 83,317 ಮೆ.ಟನ್ ರಸಗೊಬ್ಬರವನ್ನು ರೈತರಿಗೆ ಸರಬರಾಜು ಮಾಡಿದ್ದು, 26,726 ಮೆ.ಟನ್ ರಸಗೊಬ್ಬರ ಉಗ್ರಾಣಗಳಲ್ಲಿ ದಾಸ್ತಾನಿದೆ. ರಸಗೊಬ್ಬರ ಮತ್ತು ಕೀಟನಾಶಕ ಕೊರತೆಯಾಗದಂತೆ ರೈತರಿಗೆ ಸಕಾಲದಲ್ಲಿ ಸರಬರಾಜು ಮಾಡಲು ಸೂಚಿಸಲಾಗಿದೆ.




