Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೋದಿಯ ಕಾನೂನು ಕಾರ್ಯದರ್ಶಿಯಾಗಿದ್ದ ತ್ರಿವೇದಿ ಪೀಠಕ್ಕೆ 7 ಸೂಕ್ಷ್ಮ ಪ್ರಕರಣಗಳ ವರ್ಗಾವಣೆ !

ಪ್ರಧಾನಿ ನರೇಂದ್ರ ಮೋದಿಯವರ ಕಾನೂನು ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಜಸ್ಟಿಸ್‌ ಬಾಲಾ ತ್ರಿವೇದಿ ಅವರ ಪೀಠಕ್ಕೆ ನಾಲ್ಕು ತಿಂಗಳಲ್ಲಿ ಏಳು ರಾಜಕೀಯವಾಗಿ ಸೂಕ್ಷವಾದ ಪ್ರಕರಣಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು Article 14 ವರದಿ ತಿಳಿಸಿದೆ.

ಜಸ್ಟಿಸ್‌ ತ್ರಿವೇದಿ ಅವರು ಗುಜರಾತ್ ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಹೊಂದಿದ್ದರು. ಅವರು ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು 2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಕಾನೂನು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಆ.31, 2021ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬೇಲಾ ತ್ರಿವೇದಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಸ್ತುತ ಅವರು 34 ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಲ್ಲಿ ಹಿರಿತನದಲ್ಲಿ 16ನೇ ಸ್ಥಾನದಲ್ಲಿರುವ ಜಡ್ಜ್‌ ಆಗಿದ್ದಾರೆ.

ಡಿಸೆಂಬರ್ 7ರ ಗುರುವಾರ ನ್ಯೂಸ್ ಪೋರ್ಟಲ್ ಆರ್ಟಿಕಲ್ 14ನಲ್ಲಿ ಪ್ರಕಟವಾದ ವರದಿಯಲ್ಲಿ ಸ್ವತಂತ್ರ ಪತ್ರಕರ್ತ ಸೌರವ್ ದಾಸ್ ಅವರು ಕಳೆದ ನಾಲ್ಕು ತಿಂಗಳಲ್ಲಿ 7 ಪ್ರಕರಣಗಳನ್ನು ನ್ಯಾಯಮೂರ್ತಿ ತ್ರಿವೇದಿ ಅಥವಾ ನೇತೃತ್ವದ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದು Article 14 ವರದಿ ಉಲ್ಲೇಖಿಸಿ ನ್ಯಾಶನಲ್‌ ಹೆರಾಲ್ಡ್‌ ವರದಿ ಮಾಡಿದೆ.

ಆರ್ಟಿಕಲ್ 14 ನಿಂದ ಉಲ್ಲೇಖಿಸಲಾದ ಏಳು ಪ್ರಕರಣಗಳು ಈ ಕೆಳಗಿನಂತಿವೆ

  • 1. ಉಮರ್ ಖಾಲಿದ್ ಅವರ  ಜಾಮೀನು ಅರ್ಜಿ
  • 2. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA)1967ರ ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಗಳು
  • 3. ಹೆದ್ದಾರಿ ಟೆಂಡರ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧದ ಹೊಸ ತನಿಖೆಯನ್ನು ವಜಾಗೊಳಿಸುವುದನ್ನು ಪ್ರಶ್ನಿಸಿದ ಅರ್ಜಿಗಳು
  • 4. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಆರೋಪಿಯಾಗಿರುವ ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಎರಡು ಅರ್ಜಿಗಳು
  • 5. ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿ
  • 6. ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಸಲ್ಲಿಸಿದ ಜಾಮೀನು ಅರ್ಜಿ
  • 7. ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದ ಸಹ-ಆರೋಪಿ ಮಹೇಶ್ ರಾವುತ್ ಅವರ ಜಾಮೀನು ಅರ್ಜಿ

ಈ ಪ್ರಕರಣಗಳನ್ನು ಈ ಹಿಂದೆ ಇತರ ಹಿರಿಯ ನ್ಯಾಯಾಧೀಶರ ನೇತೃತ್ವದ ಪೀಠಗಳು ವಿಚಾರಣೆ ನಡೆಸುತ್ತಿದ್ದವು ಮತ್ತು ಕೆಲವು ನ್ಯಾಯಾಧೀಶರು ತ್ರಿವೇದಿ ಅವರ ಪೀಠದ ನ್ಯಾಯಾಧೀಶರಾಗಿದ್ದರು. ಇದೀಗ ಈ ಎಲ್ಲಾ ಪ್ರಕರಣಗಳನ್ನು ಜಸ್ಟಿಸ್‌ ತ್ರಿವೇದಿ ಬಾಲಾ ಅವರ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿದೆ.

ನ.29 2023ರಂದು ಈ ಎಲ್ಲಾ ವಿಷಯಗಳನ್ನು ನ್ಯಾಯಮೂರ್ತಿ ತ್ರಿವೇದಿ ನೇತೃತ್ವದ ಪೀಠದ ಮುಂದೆ  ಮರುಹಂಚಿಕೆ ಮಾಡಲಾಯಿತು ಎಂದು ವರದಿ ತಿಳಿಸಿದೆ.

ನ್ಯಾಯಮೂರ್ತಿ ತ್ರಿವೇದಿ ನೇತೃತ್ವದ ಪೀಠಕ್ಕೆ ವರ್ಗಾವಣೆಗೊಂಡ ಪ್ರಕರಣಗಳಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರಕರಣವೂ ಒಂದಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌ನ ಜೂ.12 2023ರ ತೀರ್ಪನ್ನು ಸಿಬಿಐ ಪ್ರಶ್ನಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!