ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಮೈಷುಗರ್ ಶಾಲೆಯನ್ನು ಗುತ್ತಿಗೆ ನೀಡುವ ಬಗ್ಗೆ ಚರ್ಚೆ ನಡೆದಾಗ ಮೈಷುಗರ್ ಶಾಲೆಯ ಶಿಕ್ಷಕರಿಗೆ ತಾನೇ ವೇತನ ಬಿಡುಗಡೆ ಮಾಡುತ್ತೇನೆ, ಗುತ್ತಿಗೆ ನೀಡುವುದು ಬೇಡ ಎಂದು ಪತ್ರಿಕಾಗೋಷ್ಠಿಯಲ್ಲಿ ಭರವಸೆ ನೀಡಿದ್ದರು, ಆದರೆ ಅವರು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುವ, ಕೇಂದ್ರ ಸಚಿವರು ಮೈಷುಗರ್ ಶಾಲೆಯ ಶಿಕ್ಷಕರ ವೇತನ ಪಾವತಿಗೆ ಠೇವಣಿ ಇಡುವುದಾಗಿ ತಿಳಿಸಿದ್ದರೂ, ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ. ಈ ಸಂಬಂಧ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ಆದರೆ ಅವರ ಆಪ್ತ ಸಹಾಯಕರು ಈ ಸಂಬಂಧ ಯಾವುದೇ ಸೂಚನೆ ನೀಡಿರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.. ಕೇಂದ್ರ ಸಚಿವರು ಕೊಟ್ಟ ಮಾತಿನಂತೆ ಶಿಕ್ಷಕರ ವೇತನ ಪಾವತಿಗೆ ಸೂಕ್ರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮೈಷುಗರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಅರಿಯುವಿಕೆಯ 2025-26ರ ಹಂಗಾಮು ಈಗಾಗಲೇ ಅಂತಿಮ ಹಂತಕ್ಕೆ ತಲುಪಿದ್ದು, ಇದವುರೆಗೂ 1.25 ಲಕ್ಷ ಟನ್ ಕಬ್ಬು ನುರಿಯಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನಲೆ ಪ್ರಸಕ್ತ ಸಾಲಿನ ನುರಿಸುವಿಕೆಯ ಹಂಗಾಮಿನ ಅಂತ್ಯವನ್ನು ಘೋಷಿಸಲಾಗಿದೆ ಎಂದರು.
ಇತರೆ ಖಾಸಗಿ ಕಾರ್ಖಾನೆಗಳಿಗಿಂತಲೂ 60-70 ರೂಪಾಯಿ ಕಡಿಮೆ ದರದಲ್ಲಿ ಕಬ್ಬು ಕಟಾವು ಮಾಡಿಕೊಡಲಾಗುತ್ತಿದೆ. ಆದರೂ ಆಲೆ ಮನೆಗಳಲ್ಲಿ ಹೆಚ್ಚಿನ ಬೆಲೆ ನೀಡಿ ಕಬ್ಬು ಖರೀದಿ ಮಾಡುತ್ತಿರುವ ಹಿನ್ನಲೆ ರೈತರು ಆಲೆಮನೆಗಳಿಗೆ ಒಪ್ಪಿಗೆ ಕಬ್ಬನ್ನು ಸರಬರಾಜು ಮಾಡಿದ್ದಾರೆ. ಇದರಿಂದ ಜಿಲ್ಲೆಯ ಎಲ್ಲಾ ಕಾರ್ಖಾನೆಗಳಲ್ಲಿಯೂ ಕಬ್ಬು ಸರಬರಾಜು ಕಡಿಮೆಯಾಗಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಸಕ್ಕರೆ ಕಾರ್ಖಾನೆಯ ಹಿಂದಿನ ಆಡಳಿತ ಮಂಡಳಿಯಲ್ಲಿ ಆರ್ಥಿಕ ಲೋಪಗಳು ಕಂಡು ಬಂದಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಲೋಕಾಯುಕ್ತ ತನಿಖೆಗೆ ಶಿಫಾರಸ್ಸು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಮೈಷುಗರ್ ಕಂಪನಿಯ ಸರ್ವ ಸದಸ್ಯರ ಸಭೆ
ನ.3ರಂದು ಮೈಷುಗರ್ ಕಂಪನಿಯ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದ್ದು, 2016-17ರ ಆಡಿಟ್ ವರದಿಯನ್ನು ಅನುಮೋದಿಸುವ ಸಂಬಂಧ ಸಭೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗರಾಜು, ಚಿನಕುರಳಿ ರಮೇಶ್, ಸಾತನೂರು ಕೃಷ, ದೇವಣ್ಣ, ಉದಯ್, ಸಿ.ಎಂ.ದ್ಯಾವಪ್ಪ ಇದ್ದರು.




