ನಾಗಮಂಗಲ ಪಟ್ಟಣದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಕೋಟೆ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ ಶುಕ್ರವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು.
ಮೆರವಣಿಗೆ ಈ ವರ್ಷ ಮೊದಲ ಬಾರಿಗೆ ಟಿಬಿ ಬಡಾವಣೆ ವೃತ್ತವನ್ನು ತಲುಪಿ ನಂತರ ನಾಗಮಂಗಲದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಾಗಮಂಗಲದ ಪ್ರಸಿದ್ಧ ಹಂಪೆ ಅರಸನಕೊಳದಲ್ಲಿ, ವರ್ಣ ರಂಜಿತ ವಿದ್ಯುತ್ ದ್ವೀಪಗಳ ಅಲಂಕಾರದೊಂದಿಗೆ ತೆಪ್ಪೋತ್ಸವ ನಡೆಸಿ, ಮೊದಲ ಬಾರಿಗೆ ಗಂಗಾ ಆರತಿ ನೆರವೇರಿಸಲಾಯಿತು.
ವಿಶೇಷ ಪೂಜೆಗಳೊಂದಿಗೆ ಕೋಟೆ ವಿದ್ಯಾ ಗಣಪತಿ ಅವರನ್ನು ಮೆರವಣಿಗೆಯಲ್ಲಿ ಕೊಂಡಯ್ಯಲಾಯಿತು. ಡಿಜೆ ಸೌಂಡ್ಸ್ ನೃತ್ಯಗಳು, ವಿವಿಧ ಗೊಂಬೆ ನೃತ್ಯಗಳು, ವೀರಗಾಸೆ ಕುಣಿತ, ತಮಟೆ ವಾದ್ಯಗಳು, ಹಾರನಹಳ್ಳಿ ವಾದ್ಯ ಹಾಗೂ ವಿವಿಧ ನೃತ್ಯಗಳು ಸಹಸ್ರಾರು ಸಂಖ್ಯೆಯ ಭಕ್ತಾದಿಗಳೊಂದಿಗೆ ಮೆರವಣಿಗೆ ಹೊರಟಿತು.

ಈ ಸಂದರ್ಭದಲ್ಲಿ ಯುವಕರು, ಯುವತಿಯರು ಬೇರೆ ಬೇರೆ ಗ್ರಾಮಗಳಿಂದ ಬಂದಂತಹ ಭಕ್ತ ಜನತೆಗಳು ಅತಿ ಸಂಭ್ರಮದಿಂದ ಶ್ರೀ ಕೋಟೆ ವಿದ್ಯಾ ಗಣಪತಿ ಅವರ ಮೆರವಣಿಗೆಯಲ್ಲಿ ತೊಡಗಿಸಿಕೊಂಡು ಸಂಭ್ರಮದಿಂದ ಜೈ ಕಾರ ಕೂಗುತ್ತಾ ಸಾಗಿದರು.
ಇದಕ್ಕೂ ಮುನ್ನ ಆದಿಚುಂಚನಗಿರಿ ಮಠ ಶ್ರೀಶಂಭುನಾಥ ಸ್ವಾಮೀಜಿ ಮೆರವಣಿಗೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ, ಸನಾತನ ಧರ್ಮದ ಪ್ರತಿಯೊಂದು ಹಬ್ಬಗಳು ತನ್ನದೇ ಆದ ಅರ್ಥವನ್ನು ಹೊಂದಿವೆ, ಅವುಗಳನ್ನ ಎಲ್ಲಾ ಹಿಂದೂಗಳು ಆಚರಿಸಬೇಕು, ಇದರಿಂದ ನಾವೆಲ್ಲರೂ ಮಾನವರಾಗಿ ಬಾಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಗೂಳಿಗೌಡರು, ಮಾಜಿ ಶಾಸಕರಾದ ಸುರೇಶಗೌಡ, ಅಪ್ಪಾಜಿಗೌಡರು, ಗುತ್ತಿಗೆದಾರ ಲಕ್ಷ್ಮಿಕಾಂತ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಪುರಸಭಾ ಸದಸ್ಯ ಚನ್ನಪ್ಪ, ಮಂಡ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಪಾಂಡವಪುರ ಉಪವಿಭಾಗಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.




