Tuesday, May 21, 2024

ಪ್ರಾಯೋಗಿಕ ಆವೃತ್ತಿ

ರಾಮನಗರ| ಪ್ರವಾಸಕ್ಕೆ ಬಂದು ಪ್ರಾಣ ಕಳೆದುಕೊಂಡ ಐವರು ವಿದ್ಯಾರ್ಥಿಗಳು

ಬೆಂಗಳೂರಿನಿಂದ ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಮೇಕೆದಾಟು ನೋಡಲು ಪ್ರವಾಸಕ್ಕೆ ಬಂದಿದ್ದ 12 ಜನ ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು ಐವರು  ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ದಾರುಣ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ವರ್ಷಾ (20) (ಕೆಎಲ್ಇ ಕಾಲೇಜು ರಾಜಾಜಿನಗರ 2ನೇ ಹಂತ) ಅಭಿಷೇಕ್ (20) ಬಿಹಾರ ಮೂಲದವರಾಗಿದ್ದು ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು.  ಹರ್ಪಿತಾ ಎನ್.ಎಲ್ (20) (ಎಂಜಿನಿಯರಿಂಗ್ 2ನೇ ವರ್ಷ, ಚಿಕ್ಕಬಾಣವಾರ ಆರ್.ಆರ್ ಕಾಲೇಜು, ಮಂಡ್ಯ ಮೂಲದವರು), ತೇಜಸ್ (21) ಬಿಸಿಎ ವಿದ್ಯಾರ್ಥಿ, ವಿಜಯನಗರ ಸರ್ಕಾರಿ ಕಾಲೇಜು  (ಚಿತ್ರದುರ್ಗ ಮೂಲ) ಹಾಗೂ ನೇಹಾ (19) ಕೆಮಿಸ್ಟ್ರಿ, ಕೆಎಲ್ಇ ಕಾಲೇಜು ಆರ್.ಆರ್ ನಗರ (ಚಿತ್ರದುರ್ಗ ಮೂಲ) ಸಾವಿಗೀಡಾದವರು.

ಒಟ್ಟು 12 ಜನ ವಿದ್ಯಾರ್ಥಿಗಳು ಪ್ರವಾಸ ಬಂದಿದ್ದರು. ಈ ಪೈಕಿ 5 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಅದೃಷ್ಟವಶಾತ್ 7 ವಿದ್ಯಾರ್ಥಿಗಳು ಬದುಕುಳಿದಿದ್ದಾರೆ. ಬೇಸಿಗೆಯ ಬಿಸಿ ತಾಳಲಾರದೆ, ಈ ವಿದ್ಯಾರ್ಥಿಗಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಾವೇರಿ ನದಿ ಹರಿಯುವ ಸಂಗಮಕ್ಕೆ ಪ್ರವಾಸ ಕೈಗೊಂಡಿದ್ದರು. ಈ ಎಲ್ಲ ವಿದ್ಯಾರ್ಥಿಗಳು ಟಿಟಿ ವಾಹನದಲ್ಲಿ ಮೇಕೆದಾಟಿಗೆ ಬಂದಿದ್ದರು. ಕನಕಪುರದ ಸಂಗಮದಲ್ಲಿ ಕೈ ಕೈ ಹಿಡಿದು ಒಬ್ಬರೊಬ್ಬರು ಮತ್ತೊಂದು ದಡಕ್ಕೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಮೃತದೇಹಗಳನ್ನು ಬೆಂಗಳೂರಿನ ದಯಾನಂದ ವಿದ್ಯಾಸಾಗರ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!