ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರಿ ಆಯಾ ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ ವರ್ಷಕ್ಕೂ ಹೆಚ್ಚು ಸಮಯವಾದರೂ ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸದೇ ಮಾದಿಗ ಜನಾಂಗವನ್ನು ವಂಚಿಸಲಾಗಿದೆ ಎಂದು ಆದಿ ಜಾಂಬವ ವಿಚಾರ ವೇದಿಕೆಯ ಅಧ್ಯಕ್ಷ ನಡಕಲಪುರ ಮಂಜುನಾಥ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಸಮುದಾಯಗಳ ವಿರುದ್ಧ ಪೊಲೀಸರ ಮೂಲಕ ದಲಿತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ರಾಜ್ಯ ಸರಕಾರ ಎ.ಕೆ, ಎ.ಡಿ, ಎ.ಎ ಸಮಸ್ಯೆ ನಿವಾರಣೆ ಮಾಡದೇ ಹೊಲೆಯ ಮತ್ತು ಮಾದಿಗ ಮದ್ಯೆ ಗೊಂದಲ ಸೃಷ್ಠಿಸುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಒಳ ಮೀಸಲಾತಿ ಸೀಮಿತಗೊಳಿಸದೇ ಬಡ್ತಿ, ಬ್ಯಾಕ್ಲಾಗ್ ಹುದ್ದೆಗಳಲ್ಲಿ, ರಾಜಕೀಯ ಕ್ಷೇತ್ರ, ಎಸ್.ಸಿ.ಇ.ಪಿ,ಟಿಎಸ್’ಪಿ ಬಜೆಟ್ನಲ್ಲೂ ಒಳಮೀಸಲಾತಿ ಜಾರಿ ಮಾಡಬೇಕು. ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ವಿಳಂಬ ನೀತಿಯನ್ನು ಸರಿಪಡಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಒಳಮೀಸಲಾತಿ ಸಂಬಂಧಿಸದಂತೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಿಂಚಿತ್ತು ದನಿಯೆತ್ತದ ಸಚಿವ ಹೆಚ್.ಸಿ.ಮಹದೇವಪ್ಪ ಒಳಮಿಸಲಾತಿಯ ವಿರುದ್ಧವೇ ನಿಂತಿರುವುದು ವಿಷಾದನೀಯ. ಅವರು ಸಾಮಾಜಿಕ ನ್ಯಾಯದ ಹರಿಕಾರರಲ್ಲ, ಮಾದಿಗ ಸಮಾಜದ ಸಮಸ್ಯೆ ಆಲಿದ ಸಚಿವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪರಿಸದಿದ್ದರೆ ದೇಶದ ಗಮನ ಸೆಳೆಯಲು ಕರ್ನಾಟಕದ ರಾಜಭವನ, ದೆಹಲಿಯ ಸುಪ್ರೀಂ ನ್ಯಾಯಾಲಯ, ಬಿಹಾರದ ವಿಧಾನಸೌಧದ ಎದುರು ಕರ್ನಾಟಕದಲ್ಲಿ ಒಳಮೀಸಲಾತಿಗೆ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ, ಮೈಮೇಲೆ ಮಲ ಸುರಿದು, ದೇಹ ದಂಡಿಸಿಕೊಳ್ಳುವುದಲ್ಲದೇ ಪ್ರಾಣತ್ಯಾಗಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಗೋಷ್ಟಿಯಲ್ಲಿ ಮುಖಂಡರಾದ ಪ್ರಶಾಂತ್, ಶಾಂತಕುಮಾರ, ಬಿ.ಕೃಷ್ಣ ಹಾಗೂ ಮಹೇಶ್ ಇದ್ದರು.




