Thursday, November 19, 2026

ಪ್ರಾಯೋಗಿಕ ಆವೃತ್ತಿ

ನಕಲಿ ಸಿಂಧುತ್ವ ಪ್ರಮಾಣಪತ್ರ ನೀಡಿ ಸರ್ಕಾರಿ ಹುದ್ದೆ ಪಡೆದ ಇಂಜಿನಿಯರ್ ಡಿ.ಪಿ.ನಿವಾಸ್ : ರೈತ ಮುಖಂಡರ ಆರೋಪ

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ವ್ಯಾಪ್ತಿಯ ನೀರಾವರಿ ಇಲಾಖೆಗೆ ಸೇರಿದ ಹೆಚ್.ಎಲ್ .ಬಿ.ಸಿ ನಂ 10 ರ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನಿಯೋಜನೆಯ ಮೇಲೆ ಸೇವೆ ಸಲ್ಲಿಸುತ್ತಿರುವ ಡಿ.ಪಿ.ನಿವಾಸ್ ಎಂಬುವವರು ನಕಲಿ ಸಿಂಧುತ್ವ ಪ್ರಮಾಣ ಪತ್ರದ ಮೂಲಕ ಸರ್ಕಾರಿ ಹುದ್ದೆಯನ್ನು ಪಡೆದಿದ್ದು ತಕ್ಷಣವೇ ಇವರ ವಿರುದ್ಧ ಕ್ರಮ ಜರುಗಿಸುವಂತೆ ತಾಲೂಕಿನ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಹೆಚ್‌.ಎಲ್.ಬಿ.ಸಿ ವಸತಿ ಗೃಹದ ಆವರಣದಲ್ಲಿ ಸಾಮಾಜಿಕ ಹೋರಾಟಗಾರ ಜಯಣ್ಣ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು, ಸರ್ಕಾರಕ್ಕೆ ಸುಳ್ಳು ದಾಖಲೆ ನೀಡಿ ಉದ್ಯೋಗ ಪಡೆದಿರುವವರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಈ ಬಗ್ಗೆ ಸಮಗ್ರ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ರೈತ ಮುಖಂಡರು, ಸುಳ್ಳು ದಾಖಲೆಯ ಮೂಲಕ ಉದ್ಯೋಗ ಪಡೆದಿರುವ ಇಂಜಿನಿಯರ್ ಡಿ.ಪಿ.ನಿವಾಸ್, ದೊಡ್ಡನಕಟ್ಟೆಯ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಜೆ.ಪಾಂಡುರಂಗ ಎನ್ನುವವರ ಮಗ. ಗುತ್ತಿಗೆದಾರ ಪಾಂಡುರಂಗ ಅವರು ಆದಾಯ ತೆರಿಗೆ ಪಾವತಿದಾರರಾಗಿದ್ದು 28 ಎಕರೆಗೂ ಅಧಿಕ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಇಂಜಿನಿಯರ್ ಹುದ್ದೆ ಪಡೆಯಲು ಇವರು 27-11-2018 ರಲ್ಲಿ ಹಿಂದುಳಿದ ವರ್ಗಗಳ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಸುಳ್ಳು ಪ್ರಮಾಣ ಪತ್ರವನ್ನು ಪಡೆದು ಪ್ರವರ್ಗ 3ಎ ಅಡಿ ಮೀಸಲಾತಿ ಮೂಲಕ ಉದ್ಯೋಗ ಪಡೆದುಕೊಂಡು ಮೀಸಲಾತಿಯಡಿ ಆಯ್ಕೆಯಾಗಬೇಕಾಗಿದ್ದ ಬಡ ಅಭ್ಯರ್ಥಿಗಳ ಉದ್ಯೋಗದ ಹಕ್ಕನ್ನು ಇವರು ಕಸಿದುಕೊಂಡಿದ್ದಾರೆ ಎಂದು ದೂರಿದರು.

2017-18ನೇ ಸಾಲಿನಲ್ಲಿ ಡಿ.ಪಿ.ನಿವಾಸ್ ಅವರ ತಂದೆ ಕೆ.ಜೆ.ಪಾಂಡುರಂಗ ಅವರು ಸಾಮಾಜಿಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ ಕುಟುಂಬದ ವಾರ್ಷಿಕ ಆದಾಯ 9,58,002 ರೂ.ಗಳಾಗಿದ್ದರೂ ಕೇವಲ 3 ಲಕ್ಷ ವಾರ್ಷಿಕ ಆದಾಯ ಪ್ರಮಾಣ ಪತ್ರ ಪಡೆದು ಕೆ.ಪಿ.ಎಸ್.ಸಿ ಗೆ ನಕಲಿ ಸಿಂಧುತ್ವ ಪ್ರಮಾಣ ಪತ್ರ ನೀಡಿ ವಂಚಿಸಿದ್ದಾರೆ ಎಂದು ಜಯಣ್ಣ ದೂರಿದರು.

ಡಿ.ಪಿ.ನಿವಾಸ್‌ ಅವರಂತೆಯೇ ಸುಮಾರು 30 ಕ್ಕೂ ಹೆಚ್ಚು ಜನ ನಕಲಿ ಸಿಂಧುತ್ವ ಪ್ರಮಾಣ ಪತ್ರ ನೀಡಿ ಅರ್ಹ ಬಡವರ ಮಕ್ಕಳ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದ್ದಾರೆಂಬ ಮಾಹಿತಿಯಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಜಯಣ್ಣ ಅವರು, ಕಳೆದ 02-11-2022 ರಲ್ಲಿಯೇ ಕೆ.ಪಿ.ಎಸ್.ಸಿ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಎಂಜಿನಿಯ‌ರ್ ಸೇರಿದಂತೆ ಸಂಬಂಧಪಟ್ಟವರಿಗೆಲ್ಲ ದಾಖಲೆಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಕೆ.ಆರ್.ಪೇಟೆ ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜು, ತಾಲೂಕು ರೈತಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ನಾಗೇಗೌಡ, ರೈತ ಅರುಣಕುಮಾರ್ ಮತ್ತಿತರರು ಹಾಜರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ