ಬಾಳೆ ಬೆಳೆಯಲು ಲಕ್ಷಾಂತರ ರೂ. ಸಾಲ ಮಾಡಿಕೊಂಡು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈತನೊಬ್ಬ ಬುಧವಾರ ಬೆಳಗ್ಗಿನ ಜಾವ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಕಾಳಕೆಂಪನದೊಡ್ಡಿ ಗ್ರಾಮದ ರಾಮಲಿಂಗ ಸಾವಿಗೀಡಾದವರು.
ತಮ್ಮ 2 ಎಕರೆ ಜಮೀನಿನಲ್ಲಿ ಬಾಳೆ ಬೆಳೆಯಲು ಸ್ನೇಹಿತರಿಂದ 2 ಲಕ್ಷ ರೂ. ಸಾಲ ಮಾಡಿದ್ದರು. ಬಜಾಜ್ ಪೈನಾನ್ಸ್ ನಿಂದ 2 ಲಕ್ಷ ರೂ., ಸೌತ್ ಇಂಡಿಯನ್ ಬ್ಯಾಂಕ್ ನಿಂದ 50 ಸಾವಿರ ರೂ. ಸಾಲ ಮಾಡಿದ್ದರು. ಇದಲ್ಲದೇ ಧರ್ಮಸ್ಥಳ ಸಂಘ ಹಾಗೂ ಸ್ವ ಸಹಾಯ ಸಂಘಗಳಲ್ಲೂ ಸಾಲ ಮಾಡಿಕೊಂಡು ಬಾಳೆ ಬಿತ್ತನೆ ಮಾಡಿದ್ದರು. ಆದರೆ ಬಾಳೆಗೆ ಬೆಂಕಿರೋಗ ಕಾಣಿಸಿಕೊಂಡು ಫಸಲು ನಷ್ಟವಾಗಿತ್ತು.
ಇದರಿಂದ ಬೇಸತ್ತ ರೈತ ರಾಮಲಿಂಗ ಕಳೆದ ಅ.31ರಂದು ವಿಷ ಸೇವಿಸಿದ್ದರು. ಅವರನ್ನು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಾವಿಗೀಡಾಗಿದ್ದಾರೆ.
ಈ ಬಗ್ಗೆ ಮೃತ ರೈತನ ಪತ್ನಿ ಸೌಮ್ಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.




