ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದು, ದೃಢಸಂಕಲ್ಪದ ಕೊರತೆಯಿಂದಾಗಿ ಮಂಡ್ಯನಗರ ಅಭಿವೃದ್ದಿ ಹೊಂದದೇ, ಇಂದಿಗೂ ದೊಡ್ಡ ಗ್ರಾಮವಾಗಿ ಉಳಿದಿದೆ ಎಂದು ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡ ತಿಳಿಸಿದರು.
ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಮಂಡ್ಯ ನಗರದ ನಂದಾ ವೃತ್ತದಲ್ಲಿ ಆಟೋ ಚಾಲಕರು ಆಯೋಜಿಸಿದ್ದ ಪೋಸ್ಟರ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಿರ್ಜಾ ಇಸ್ಮಾಯಿಲ್ ಮತ್ತು ನಾಲ್ವಡಿ ಅವರ ದೂರದೃಷ್ಟಿಯ ದೃಷ್ಟಿಯಿಂದ 1941 ರಲ್ಲಿ ಜಿಲ್ಲಾ ಆಸ್ಪತ್ರೆಗಾಗಿ ರೈತರಿಂದ 45 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ ಇದರಲ್ಲಿ ತಮಿಳು ಕಾಲೋನಿ ಸೇರಿದಂತೆ ಪಟ್ಟಭದ್ರರು 19 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್, ಕ್ರಿಟಿಕಲ್ ಕೇರ್ ಸೇರಿದಂತೆ ಅನೇಕ ಆರೋಗ್ಯ ಸೇವೆಗಳು ಜಿಲ್ಲೆಯ ಜನರಿಗೆ ಲಭ್ಯವಿಲ್ಲ ಎಂದು ದೂರಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಮಾತನಾಡಿ ಮೆಡಿಕಲ್ ಕಾಲೇಜು ಒತ್ತುವರಿ ತೆರವುಗೊಳಿಸಿ ಅಗತ್ಯ ಆರೋಗ್ಯ ಸೇವೆ ಒದಗಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಒತ್ತುವರಿ ತೆರವುಗೊಳಿಸುವಂತೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹವುಳ್ಳ ಪೋಸ್ಟರ್ ಗಳನ್ನು ನೂರಾರು ಆಟೋಗಳಿಗೆ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ರೈತಸಂಘದ ಲಿಂಗಾಪ್ಪಾಜಿ, ಕರುನಾಡ ಸೇವಕರು ಸಂಘಟನೆಯ ಎಸ್ ಕೆ ರಾಜೂಗೌಡ, ಮನು, ರಕ್ಷಣಾ ವೇದಿಕೆಯ ಆಟೋ ಘಟಕದ ವೆಂಕಟೇಶ್, ಸೋಮಶೇಖರ್, ಮುದ್ದೇಗೌಡ,ಪ್ರವೀಣ್ ಸೇರಿದಂತೆ ಹಲವು ಚಾಲಕರು ಉಪಸ್ಥಿತರಿದ್ದರು.




