Sunday, May 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ-ಜೆಡಿಎಸ್ ಮೈತ್ರಿ; ವಿಚಾರ ವರಿಷ್ಟರ ತೀರ್ಮಾನಕ್ಕೆ ಬದ್ದ- ಪುಟ್ಟರಾಜು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಥಾನ ಹೊಂದಾಣಿಕೆ ಮೂಲಕ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಪಕ್ಷದ ವರಿಷ್ಟರ ತೀರ್ಮಾನಕ್ಕೆ ಜಿಲ್ಲಾ ಜಾ.ದಳ ಬದ್ದವಾಗಿ ಕಾರ್ಯ ನಿರ್ವಹಿಸುವುದಾಗಿ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಮಂಡ್ಯ ನಗರದ ಜೆಡಿಎಸ್ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಮೈತ್ರಿ ಹಾಗೂ ಕಾವೇರಿ ನೀರಿನ ವಿಚಾರವಾಗಿ ಜಿಲ್ಲೆಯ ರೈತರ ರಕ್ಷಣೆ ಮತ್ತಿತರ ವಿಷಯವಾಗಿ ಚರ್ಚೆ ನಡೆಸಿ ತರುವಾಯ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎರಡು ಪಕ್ಷಗಳ ರಾಷ್ಟ್ರೀಯ ನಾಯಕರ ಚಿಂತನೆಗೆ ಬದ್ದರಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದರು.

ಪಕ್ಷದ ವರಿಷ್ಟರಾದ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಹಾಗೂ ಜಿ.ಟಿ.ದೇವೇಗೌಡ ನೇತೃತ್ವದ ಪಕ್ಷದ ಕೋರ್ ಕಮಿಟಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗುವುದಾಗಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕಾವೇರಿ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ರೈತರನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಮಾಡಿ ಕೃಷಿ ಹಾಗೂ ಕುಡಿಯುವ ನೀರು ಪಡೆಯಲು ಹೋರಾಟ ನಡೆಸಲಾವುದೆಂದು ತಿಳಿಸಿದರು.

ಚುನಾವಣಾ ಮೈತ್ರಿ ವಿಚಾರವಾಗಿ ಆಸಕ್ತಿ ತೋರುವ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ವಿಚಾರದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ಸರಿಯಲ್ಲ, ಕಾವೇರಿ ವಿಚಾರವಾಗಿ ರಾಜ್ಯದ ಹಿತ ಕಾಯುವುದು, ದೇವೇಗೌಡರ ಆದ್ಯತೆಯ ಕೆಲಸ ಈ ವಿಚಾರದಲ್ಲಿ ಗೌಡರ ಮುಂದೆ ನಾನು ಮತ್ತು ಕೃಷಿ ಸಚಿವರು ಗೌಣ ಎಂಬುವುದನ್ನು ಅವರು ಮನಗಾಣಲಿ ಎಂದು ತಿರುಗೇಟು ನೀಡಿದರು.

ಮುಂಬರುವ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿತನಲ್ಲ ನಮ್ಮ ಪಕ್ಷದಲ್ಲಿ ಹಲವರು ಸಮರ್ಥರಿದ್ದಾರೆ. ಪಕ್ಷ ನಿಯೋಜಿಸುವ ಅಭ್ಯರ್ಥಿ ಪರ ಕೆಲಸ ಮಾಡುವುದಷ್ಟೆ ನನ್ನ ಕೆಲಸವೆಂದರು.

ಎರಡು ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವೇ ಹೊರತು ಅನ್ಯ ಮಾರ್ಗವಿಲ್ಲ ಎಂಬ ಕೃಷಿ ಸಚಿವರ ಹೇಳಿಕೆ ಹಾಸ್ಯಾಸ್ಪದ. 2018ರಲ್ಲಿ ಜೆಡಿಎಸ್ 7 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾಗ ಇದೇ ಚಲುವರಾಯಸ್ವಾಮಿ ಅವರನ್ನು ನಾನು ಡೆಡ್ ಹಾರ್ಸ್ ಎಂದು ಮೂದಲಿಸಿದ್ದೆ, ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮೆ ಲ್ಲರನ್ನು ಜಿಲ್ಲೆಯ ಜನ ಸೋಲಿಸಿ ಡೆಡ್ ಹಾರ್ಸ್ ಮಾಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳುವ ಜಾಣ್ಮೆ ಜಿಲ್ಲೆಯ ಮತದಾರರಿಗಿದೆ ಎಂದರು.

ಗೋಷ್ಟಿಯಲ್ಲಿ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಸುರೇಶ್ ಗೌಡ, ಡಾ.ಅನ್ನದಾನಿ, ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು ಸೇರಿದಂತೆ ತಾಲ್ಲೂಕು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!