ಬಹು ನಿರೀಕ್ಷಿತ ‘ದ ಟಾಸ್ಕ್’ ಸಿನಿಮಾ ರಾಜ್ಯಾದ್ಯಂತ ಶುಕ್ರವಾರ ತೆರೆಕಂಡಿದೆ. ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕನ್ನಡ ಸೇನೆ ಸಂಘಟನೆ ನೇತೃತ್ವದಲ್ಲಿ ಸಂಭ್ರಮಾಚರಿಸಲಾಯಿತು.
ಕನ್ನಡಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಚಿತ್ರಮಂದಿರದ ಆವರಣದಲ್ಲಿ ಜಮಾಯಿಸಿದ ಚಿತ್ರರಸಿಕರು, ತಮಟೆ-ನಗಾರಿ ಬಾರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸಿನಿಮಾದ ಪೋಸ್ಟರ್ ಗೆ ಪುಷ್ಪಾರ್ಚನೆ ಸಲ್ಲಿಸಿದ ಅಭಿಮಾನಿಗಳು ಚಿತ್ರವೂ ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿದರು. ಇದೇ ವೇಳೆ ಸಿನಿಮಾ ನೋಡಲು ಬಂದ ಪ್ರೇಕ್ಷಕರನ್ನ ಗುಲಾಬಿ ಹೂ ಕೊಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕನ್ನಡ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ‘ದ ಟಾಸ್ಕ್’ ಸಿನಿಮಾ ನೈಜ ಘಟನೆಯನ್ನ ಆಧಾರಿತ ಸಿನಿಮಾವಾಗಿದೆ. ದಕ್ಷ ಪೊಲೀಸ್ ಅಧಿಕಾರಿ ರಾಜೇಶ್ ಅವರ ಪುತ್ರ ಜಯಸೂರ್ಯ ಆರ್.ಆಜಾದ್ ಅವರು ನಾಯಕ ನಟರಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಭೀಮಾ ಚಿತ್ರದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ ಜಯಸೂರ್ಯ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. ಶಿವಮೊಗ್ಗ ರಘು ಈ ಚಿತ್ರವನ್ನ ನಿರ್ದೇಶಿಸಿದ್ದು, ಯುವ ಪ್ರತಿಭೆಗಳನ್ನ ಹಾಗೂ ಹೊಸ ಸಿನಿಮಾಗಳನ್ನ ಪ್ರೋತ್ಸಾಹಿಸಿ, ಬೆಳೆಸುವ ದೃಷ್ಟಿಯಿಂದ ದ ಟಾಸ್ಕ್ ಚಿತ್ರವನ್ನ ಹೆಚ್ಚಿನ ಜನರು ವೀಕ್ಷಿಸುವಂತೆ ಮನವಿ ಮಾಡಿದರು.
ಈಗಾಗಲೇ ಆಕರ್ಷಕ ಟ್ರೇಲರ್ ಮೂಲಕ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ದ ಟಾಸ್ಕ್ ಚಿತ್ರವು ಯುವಜನರಿಗೆ ಉತ್ತಮ ಸಂದೇಶ ಸಾರುವ ಸಿನಿಮಾವಾಗಿದೆ ಎಂದರು.
ಈ ವೇಳೆ ಮುಡಾ ಸದಸ್ಯ ಎನ್.ದೊಡ್ಡಯ್ಯ, ನಗರಸಭೆ ಮಾಜಿ ಸದಸ್ಯ ಡಿ.ಮಂಜುನಾಥ್, ಮುಖಂಡರಾದ ಆದರ್ಶ್ ಗೌಡ, ಆನಂದ್, ಮಹಾಂತಪ್ಪ, ನಾಗಣ್ಣ, ಸೌಭಾಗ್ಯ ಸೇರಿದಂತೆ ಹಲವರಿದ್ದರು.




