Monday, November 23, 2026

ಪ್ರಾಯೋಗಿಕ ಆವೃತ್ತಿ

ಕೌಶಲ್ಯ ಹೊಂದಿರುವ ಯುವಜನರಿಗೆ ವಿಫುಲ ಉದ್ಯೋಗಾವಕಾಶ : ಚಲುವರಾಯಸ್ವಾಮಿ

ಬುದ್ಧಿ ಮತ್ತು ಕೌಶಲ್ಯ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ವಿಫುಲ ಅವಕಾಶಗಳಿವೆ.‌ಆದರೆ ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟಸಾಧ್ಯವಾಗಿದ್ದು, ಉದ್ಯಮಿಗಳಾಗುವತ್ತ ಹೆಚ್ಚುಗಮನ ಹರಿಸಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಾಗಮಂಗಲ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡಬೇಕೆಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಈ ಮೇಳ ನಡೆಸುತ್ತಿರುವ ಯುನಿಕ್ ಸ್ಕಿಲ್ ಸೋರ್ಸ್ ಸೆಲ್ಯೂಷನ್ ಸಂಸ್ಥೆಯ ಮುಖ್ಯಸ್ಥರು ನನಗೆ ಅತ್ಯಾಪ್ತ ರಾಗಿದ್ದು, ಮೇಳದಲ್ಲಿ ನೋಂದಾಯಿಸಿಕೊಂಡಿರುವ ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡುತ್ತಾರೆ. ತರಬೇತಿ ವೇಳೆ ಉಚಿತ ಊಟ, ವಸತಿ ಸೇರಿದಂತೆ 15ಸಾವಿರಕ್ಕೂ ಗೌರವಧನ ನೀಡಲಿದ್ದಾರೆ. ಹೆಣ್ಣು ಮಕ್ಕಳು ಧೈರ್ಯವಾಗಿ ಮುಂದೆ ಬಂದು ಇಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಮೇಳದಲ್ಲಿ ಭಾಗವಹಿಸಿರುವ ಗಂಡು ಮಕ್ಕಳಿಗೂ ಸಹ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ರಾಜ್ಯದಲ್ಲಿರುವ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಕಲ್ಪಿಸಿಕೊಡಲಿದ್ದಾರೆ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮುಗಿದ ನಂತರ ಉದ್ಯೋಗಿಯಾಗಬೇಕು ಅಥವಾ‌ ಉದ್ಯಮಿಯಾಗಬೇಕು. ಕೃಷಿಯನ್ನೂ ಸಹ ಉದ್ಯಮ ಮಾಡಿಕೊಂಡರೆ ಪ್ರತಿ ತಿಂಗಳು ಕನಿಷ್ಠ 5 ಸಾವಿರದಿಂದ 2ಲಕ್ಷದ‌ವರೆಗೂ  ಸಂಪಾದನೆ ಮಾಡಬಹುದು. ಆಗ ಉದ್ಯೋಗಕ್ಕಾಗಿ ಮತ್ತೊಬ್ಬರ ಮುಂದೆ ಕೈ ಕಟ್ಟಿ ನಿಲ್ಲುವ ಅಗತ್ಯ ಇರುವುದಿಲ್ಲ. ಸ್ವಯಂ ಉದ್ಯೋಗದಿಂದ ನಿಮ್ಮ ಗೌರವ ಹೆಚ್ಚಾಗಲಿದ್ದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬಹುದು. ರಾಜ್ಯದಲ್ಲಿ 7ಕೋಟಿಗೂ ಅಧಿಕ ಜನಸಂಖ್ಯೆ ಇದ್ದು 7ಲಕ್ಷ ಸರ್ಕಾರಿ ಹುದ್ದೆಗಳಷ್ಟೆ ಲಭ್ಯವಿದೆ. ವಿದ್ಯೆ ಕಲಿತವರೆಲ್ಲರೂ ಸರ್ಕಾರಿ ಕೆಲಸವೇ ಬೇಕೆಂಬ ಹಠವನ್ನು ಬಿಡಬೇಕು. ಇಂಜಿನೀಯರಿಂಗ್ ಪದವಿ ಪಡೆದಿರುವ ಅನೇಕ ಯುವಕರು ಗ್ರಾಮ ಲೆಕ್ಕಿಗರಾಗಿ ನೇಮಕಗೊಂಡು ಹಳ್ಳಿಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ತಮ್ಮ ವಿದ್ಯೆಗೆ ತಕ್ಕಂತೆ ಸ್ವ ಉದ್ಯೋಗ ಅಥವಾ ಉದ್ಯಮ ಕಂಡುಕೊಂಡರೆ ನೀವೆ ನೂರಾರು ಮಂದಿ ನಿರುದ್ಯೋಗಿಗಳಿಗೆ ಕೆಲಸ ಕೊಡಬಹುದು ಎಂದು ತಿಳಿಸಿದರು.

ಉದ್ಯೋಗ ಹರಸಿ ಬೆಂಗಳೂರಿನ ನನ್ನ‌ ಗೃಹ ಕಚೇರಿಗೆ ಪ್ರತಿ ನಿತ್ಯ ನೂರಾರು ಮಂದಿ ಬರುತ್ತಾರೆ. ಇದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ತಾಲೂಕಿನಲ್ಲಿ ಉದ್ಯೋಗ ಮೇಳ ಆಯೋಜಿಸಿದರೆ ಈ ಮೇಳದಲ್ಲಿ ಭಾಗವಹಿಸಲು ಯುವಕರು ಆಸಕ್ತಿ ವಹಿಸುತ್ತಿಲ್ಲ. ನಾನು ನನ್ನ ಶಕ್ತಿ ಮೀರಿ ಎಷ್ಟು ಜನರಿಗೆ ಕೆಲಸ ಕೊಡಿಸಬಹುದೋ ಅಷ್ಟು ಮಾಡಲು ಸಾಧ್ಯ. ಅದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ ಎಂದರು.

ಯುನಿಕ್ ಸ್ಕಿಲ್ ಸೋರ್ಸ್ ಸೆಲ್ಯೂಷನ್ ಸಂಸ್ಥೆ ಮುಖ್ಯಸ್ಥ ಕೆ.ಪಿ.ನಾಗೇಶ್ ಮಾತನಾಡಿ, ಸಚಿವರ ಕೋರಿಕೆಯಂತೆ ತಾಲೂಕಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಿತ ಟಾಟಾ ಕಂಪನಿಗೆ 18ಸಾವಿರ ಉದ್ಯೋಗಿಗಳ ಅಗತ್ಯವಿದೆ. ಹಳ್ಳಿ ಗಳಲ್ಲಿ ಯುವ ಸಮುದಾಯಕ್ಕೆ ಕೆಲಸವಿಲ್ಲ. ಕಂಪನಿಗಳಲ್ಲಿ ಉದ್ಯೋಗಿಗಳಿಲ್ಲ. ಹಾಗಾಗಿ
ಗ್ರಾಮೀಣ ಪ್ರದೇಶದ ಯುವ ಸಮುದಾಯ ಸಮಾನ್ಯ ಜ್ಞಾನ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಕಂಪನಿ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಯುನಿಕ್ ಸ್ಕಿಲ್ಬಸೋರ್ಸ್ ಸೆಲ್ಯೂಷನ್ ಸಂಸ್ಥೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದರು. ಮೇಳದಲ್ಲಿ 600 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡರು.

ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿದರು. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್
ಕಂಪನಿಯ ಮುಖ್ಯಸ್ಥರಾದ ಶಾಂತಲಾ ಮೋಹನ್, ವೀಣಾ ಶಿವಮೂರ್ತಿ, ಮುರಳಿ, ಎಚ್.ಟಿ.ಕೃಷ್ಣೇಗೌಡ, ಪುರಸಭೆ ಮುಖ್ಯಾಧಿಕಾರಿ ವೀಣಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ನಿರ್ದೇಶಕ ಸುರೇಂದ್ರ, ಮುಖಂಡರಾದ ಮೂಡ್ಲೀಗೌಡ, ಚಿಕ್ಕಮ್ಮ, ಯಶೋಧಮ್ಮ, ಸಾವಿತ್ರಮ್ಮ ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ