Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಹಾಸ್ಟೆಲ್, ಶಾಲೆಗಳಿಗೆ ಸಿಇಓ ನಂದಿನಿ ಭೇಟಿ : ಪರಿಶೀಲನೆ

ವಿದ್ಯಾರ್ಥಿ ನಿಲಯ ಪೋರ್ಟಲ್ ನಲ್ಲಿ ವಸತಿ ನಿಲಯಗಳಲ್ಲಿನ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ 60 ಪ್ರಶ್ನಾವಳಿಗಳಿದ್ದು, ಈ ಎಲ್ಲಾ ಪ್ರಶ್ನಾವಳಿಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಿ ವಸತಿ ನಿಲಯಗಳಲ್ಲಿನ ಸೌಲಭ್ಯಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ. ಆರ್ ನಂದಿನಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
 ಮದ್ದೂರಿನ ಸೋಮನಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ  ವಿದ್ಯಾರ್ಥಿ ನಿಲಯಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಹಾಸ್ಟೆಲ್ ನಲ್ಲಿ ನಿಗದಿತ ಮೆನು ಪ್ರಕಾರ ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸಬೇಕು. ಆಹಾರ ತಪಾಸಣೆ ಮಾಡಿಸಬೇಕು, ಸುರಕ್ಷತೆ, ಭದ್ರತೆ ಕಾಯ್ದಕೊಳ್ಳಬೇಕು ಎಂದು ಸೂಚನೆ ನೀಡಿದರು.
ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆ, ಆನ್ಲೈನ್ ಗೇಮ್ ನಂತಹ ಇತರೆ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು. ವಾರ್ಡನ್ ಗಳು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಬೇಕು, ಅವರನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವಂತಹ ಕೆಲಸ ಮಾಡಬೇಕೆಂದು ಎಂದು ವಸತಿ ನಿಲಯದ ವಾರ್ಡನ್ ಅವರಿಗೆ ತಿಳಿಸಿದರು.
ಸಹಾಯವಾಣಿ ಸಂಖ್ಯೆಯನ್ನು ಅಳವಡಿಸಲು ಸೂಚನೆ: ವಸತಿ ನಿಲಯಗಳಲ್ಲಿನ ಕುಂದು ಕೊರತೆಗಳ ಬಗ್ಗೆ ದೂರು ದಾಖಲಿಸಲು ಸಹಾಯವಾಣಿ ಸಂಖ್ಯೆ 9480872008 ಅನ್ನು ನೀಡಲಾಗಿದ್ದು, ಸದರಿ ಸಂಖ್ಯೆಯನ್ನು ವಸತಿ ನಿಲಯದ ಅಡುಗೆ ಮನೆ, ನೋಟೀಸ್ ಬೋರ್ಡ್, ಶಾಲೆಯ ಮುಖ್ಯ ದ್ವಾರ ಸೇರಿದಂತೆ ಇತರೆ ಕಡೆಗಳಲ್ಲಿ ಡಿಸೆಂಬರ್ 31ರೊಳಗೆ ಪ್ರದರ್ಶನ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಂಡ್ಯ ಜಿಲ್ಲೆಯ ಎಲ್ಲಾ ಶಾಲೆಯ ಅಡುಗೆ ಕೋಣೆಯ ಹತ್ತಿರ ಡಿಸೆಂಬರ್ 31ರೊಳಗೆ ಸಹಾಯವಾಣಿ ಸಂಖ್ಯೆ 9480872008 ಅನ್ನು ಅಳವಡಿಸಬೇಕು. ಆಹಾರ ಸಾಮಾಗ್ರಿಗಳ ಗುಣಮಟ್ಟ ಹಾಗೂ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಈ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ಹರಿಸಿ: ಸೋಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ವಹಿಸಿ ಪಾಠ ಮಾಡಬೇಕು ಎಂದು ಶಾಲೆಯ ಶಿಕ್ಷಕರಿಗೆ ಸೂಚಿಸಿದರು.
ಸಂವಿಧಾನದ ಪೀಠಿಕೆ ಓದಿಗೆ ಮೆಚ್ಚುಗೆ
7ನೇ ತರಗತಿಯ ಮಕ್ಕಳು ಸಂವಿಧಾನದ ಪೀಠಿಕೆಯನ್ನು ನೋಡದೆಯೇ ಹೇಳಿದ್ದು, ಈ ಬಗ್ಗೆ ಸಿಇಓ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಕೆಲವು ಮಕ್ಕಳು ಕನ್ನಡ ಪಠ್ಯವನ್ನು ಓದಲು ಕಷ್ಟಪಡುತ್ತಿದ್ದು, ಅಂತಹ ಮಕ್ಕಳಿಗೆ ಶಾಲೆಯ ಪ್ರಾರಂಭ ಹಾಗೂ ಶಾಲೆಯ ಮುಕ್ತಾಯದ ನಂತರವೂ ವಿಶೇಷ ಗಮನಹರಿಸಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕೆಯನ್ನು ಉತ್ತಮಗೊಳಿಸಲು ಕ್ರಮವಹಿಸಬೇಕು. 7ನೇ ತರಗತಿಯಿಂದಲೇ ಮಕ್ಕಳನ್ನು 10ನೇ ತರಗತಿಗೆ ತಯಾರಾಗುವಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಸಿಯೂಟ ಯೋಜನೆಯಡಿ ಗುಣಮಟ್ಟದ ಆಹಾರ ಒದಗಿಸಿ: ಶಾಲೆಯ ಅಡುಗೆ ಕೋಣೆಯ ಸುತ್ತಮುತ್ತ ಶುಚ್ಚಿತ್ವ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಪ್ರತಿದಿನ ಪೌಷ್ಠಿಕ ಆಹಾರ ನೀಡಬೇಕು. ಆಹಾರವು ಗುಣಮಟ್ಟದಿಂದ ಕೂಡಿರಬೇಕು ಹಾಗೂ ವಿದ್ಯಾರ್ಥಿಗಳಿಗೆ ಶುಚಿಯಾದ ಮತ್ತು ರುಚಿಯಾದ ಆಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮೊಟ್ಟೆ ನೀಡುತ್ತಿರುವ ಬಗ್ಗೆ ರಿಜಿಸ್ಟರ್ ಅನ್ನು ಪರಿಶೀಲಿಸಿದರು. ಪ್ರತಿ ದಿನ ಮೊಟ್ಟೆ ನೀಡುವ ಬಗ್ಗೆ ಹಾಗೂ ಯಾವ ದಿನ ಯಾವ ವಿದ್ಯಾರ್ಥಿ ಮೊಟ್ಟೆ ಸೇವಿಸುವುದಿಲ್ಲ ಎಂಬ ಬಗ್ಗೆ  ಪೋಷಕರಿಂದ ಪತ್ರ ಬರೆಸಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಅಂಕಿ-ಅಂಶದಲ್ಲಿ ಹಾಗೂ ನೀಡುತ್ತಿರುವ ಆಹಾರದಲ್ಲಿ ವ್ಯತ್ಯಾಸ ಆಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.
ನಮ್ಮ ನಡಿಗೆ ಅಕ್ಷರ ದಾಸೋಹದ ಅಡುಗೆ ಮನೆ ಕಡೆಗೆ ಅಭಿಯಾನ: ಅಕ್ಷರ ದಾಸೋಹ ಯೋಜನೆಯಡಿ ಪೂರೈಕೆ ಮಾಡಲಾಗುತ್ತಿರುವ ಆಹಾರ ಸಾಮಾಗ್ರಿಗಳ ಗುಣಮಟ್ಟ, ಆಹಾರದ ಗುಣಮಟ್ಟ, ಆಹಾರ ಪದಾರ್ಥಗಳ ಸಂರಕ್ಷಣೆಯ ವಿಧಾನ, ಅಡುಗೆ ಕೋಣೆಯ ಶುಚಿತ್ವ, ಮೊಟ್ಟೆ ವಿತರಣೆಯ ಅಂಕಿ ಅಂಶಗಳ ಪರಿಶೀಲನೆ ಸೇರಿದಂತೆ ಇತರೆ ವಿಷಯಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಯ ಬಿ.ಆರ್.ಸಿ., ಸಿ.ಆರ್.ಸಿ., ಬಿಇಓ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ನಡಿಗೆ ಅಕ್ಷರ ದಾಸೋಹದ ಅಡುಗೆ ಮನೆ ಕಡೆಗೆ ಅಭಿಯಾನದಡಿ ಶಾಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಕ್ರಮವಹಿಸಬೇಕು ಎಂದು ಈಗಾಗಲೇ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಲೋಕೇಶ್, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ರವಿಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಮದ್ದೂರು ತಾಲ್ಲೂಕು ಕ್ಷೇತ ಶಿಕ್ಷಣಾಧಿಕಾರಿ ಧನಂಜಯ್, ಸೋಮನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ