ಭಾರತೀಯ ಸಂವಿಧಾನ ಭಾರತದ ಪ್ರಜೆಗಳಿಗೆ ತನ್ನದೇ ಆದ ಸ್ಥಾನಮಾನ ಹಾಗೂ ಹಕ್ಕುಗಳನ್ನು ನೀಡಿದೆ, ಅವುಗಳಲ್ಲಿ ಪ್ರಮುಖವಾದ ಹಕ್ಕುಗಳಲ್ಲಿ ಒಂದಾದ ಮಾನವ ಹಕ್ಕುಗಳನ್ನು ಮನುಷ್ಯನೇ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ ಹೇಳಿದರು.
ಇಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕಲ್ಲು ಕಟ್ಟಡ ಬಾಲಕಿಯರ ಸರ್ಕಾರಿ ಪದವ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ “ಮಾನವ ಹಕ್ಕುಗಳ ದಿನಾಚರಣೆ 2025” ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂವಿಧಾನ ನಮಗೆ ರಾಜಕೀಯ ಮತ್ತು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಕ್ಕುಗಳನ್ನು ನೀಡಿದೆ. ಇದರ ಜೊತೆಗೆ ಇನ್ನು ಅನೇಕ ಹಕ್ಕುಗಳನ್ನು ನೀಡಿದೆ. ಮನುಷ್ಯನ ಹುಟ್ಟಿನಿಂದಲೇ ಮನುಷ್ಯನಿಗೆ ಮಾನವ ಹಕ್ಕುಗಳು ಅನ್ವಯಿಸುತ್ತವೆ. ಮಾನವ ಹಕ್ಕುಗಳಲ್ಲಿ ಮೂಲ ಹಕ್ಕು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು. ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲೆಂದು ರಾಜ್ಯದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಮಾತನಾಡಿ ಮಾನವ ಹಕ್ಕುಗಳ ಆಯೋಗದ ಮೂಲ ಉದ್ದೇಶ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವುದು. ಮಾನವ ಹಕ್ಕುಗಳು ಉಲ್ಲಂಘನೆ ಆದರೆ ಮಾನವ ಹಕ್ಕುಗಳ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ ಚೆಲುವಯ್ಯ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಪಿ.ಇ.ಎಸ್ ಕಾನೂನು ಕಾಲೇಜಿನ ಕಾನೂನು ಸಹ ಪ್ರಾಧ್ಯಾಪಕರಾದ ಕೆ ಎಸ್ ಡಾ .ಜಯಕುಮಾರ್ ಮಾತನಾಡಿದರು.
ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕಲ್ಲುಕಟ್ಟಡ) ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಲಿಂಗು ಅವರು “ಮಾನವ ಹಕ್ಕುಗಳ ನಿಯಮ ಉಲ್ಲಂಘನೆ ಮಾಡದಂತೆ” ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕಲ್ಲುಕಟ್ಟಡ) ಪ್ರಾಂಶುಪಾಲ ಹೆಚ್.ಪಿ ತಮ್ಮೇಗೌಡ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಡಿ.ಎಫ್.ಓ ರಘು ಡಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಆಶಾ, ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




