Tuesday, November 24, 2026

ಪ್ರಾಯೋಗಿಕ ಆವೃತ್ತಿ

ಎರಡೂವರೆ ವರ್ಷಗಳಲ್ಲಿ 93,925 ಉದ್ಯೋಗ ಸೃಷ್ಟಿ : ಎಂ.ಬಿ.ಪಾಟೀಲ್


ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಉತ್ತರ

1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ


ಹೊಸ ಕೈಗಾರಿಕಾ ನೀತಿಯಿಂದ ರಾಜ್ಯದಲ್ಲಿ 93,925 ಉದ್ಯೋಗ ಸೃಷ್ಟಿಯಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ (2022-23 ರಿಂದ 2025 ಅಕ್ಟೋಬರ್ ವರೆಗೆ) 1886 ಯೋಜನೆಗಳಿಂದ 6,92,545 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಇವುಗಳಲ್ಲಿ 67 ಯೋಜನೆಗಳು ಅನುಷ್ಠಾನಗೊಂಡಿದ್ದು, 93,925 ಉದ್ಯೋಗ ಸೃಜನೆಯಾಗಿದೆ ಎಂದು ಉತ್ತರಿಸಿದ್ದಾರೆ.

ಹೊಸ ಕೈಗಾರಿಕಾ ನೀತಿ 2025–2030ರ ಜಾರಿಗೆ ತಂದನಂತರ 93 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ₹5,50,805 ಕೋಟಿ ಬಂಡವಾಳ ಹೂಡಿಕೆ ಮತ್ತು 8,76,233 ಉದ್ಯೋಗಾವಕಾಶಗಳ ನಿರೀಕ್ಷೆ ಇದೆ.

2025–30 ಕೈಗಾರಿಕಾ ನೀತಿಯು, ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ಕೈಗಾರಿಕಾ ವಿಕಾಸದ ಯೋಜನೆಗಳನ್ನು ರೂಪಿಸಲಾಗಿದೆ. ಬೆಂಗಳೂರಿನಿಂದ ಹೊರಗಡೆ, ಕೈಗಾರಿಕಾ ಹಿಂದುಳಿದ ಪ್ರದೇಶವನ್ನು ಉತ್ತೇಜಿಸುವ ಗುರಿ ಹೊಂದಿದೆ.

ರಾಜ್ಯದ ಎಲ್ಲಾ ಜಿಲ್ಲಾ ಪ್ರದೇಶಗಳಿಗೂ ಗಣನೀಯ ಪ್ರಮಾಣದಲ್ಲಿ ಕೈಗಾರಿಕೆಗಳ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂರು ವಲಯಗಳನ್ನಾಗಿ ವರ್ಗಿಕರಿಸಿದೆ. ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ ಅಥವಾ ತಾಲೂಕುಗಳನ್ನು ವಲಯ-1 ಮತ್ತು ವಲಯ-2ರಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ-3ರಲ್ಲಿ ವರ್ಗೀಕರಿಸಲಾಗಿದೆ.

ಕೈಗಾರಿಕಾ ನೀತಿ 2025-30ರ ಅಡಿಯಲ್ಲಿ ಪ್ರೋತ್ಸಾಹ ಮತ್ತು ರಿಯಾಯಿತಿ ಪಡೆಯುವ ಕೈಗಾರಿಕೆಗಳು ಒಟ್ಟು ಕನಿಷ್ಠ 70% ಉದ್ಯೋಗಾವಕಾಶ ಹಾಗೂ ಗ್ರೂಪ್ ಡಿ ಉದ್ಯೋಗಗಳನ್ನು 100% ಕನ್ನಡಿಗರಿಗೆ ನೀಡಬೇಕೆಂದು ಷರತ್ತು ವಿಧಿಸಲಾಗುತ್ತಿದೆ.

2018–19ರಿಂದ 2022–23ರವರೆಗೆ 1878 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ 456841.90 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮತ್ತು 800482 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ. ಇವುಗಳ ಪೈಕಿ 260 ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ 98662.7 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ. 1,97,208 ಉದ್ಯೋಗ ಸೃಜನೆಯಾಗಿದೆ.

ಕಳೆದ ಎರಡೂವರು ವರ್ಷಗಳಲ್ಲಿ 1,91,454 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ. 2023–24 ರಲ್ಲಿ 54,427 ಕೋಟಿ ರೂ., 2024–25ರಲ್ಲಿ 56,030 ಕೋಟಿ ರೂ., 2025–26 (ಏಪ್ರಿಲ್–ಸೆಪ್ಟೆಂಬರ್) 80,997 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ