ಮಂಡ್ಯ: ನಗರದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮೊದಲ ಬಾರಿಗೆ ನಡೆಸಿದ್ದ ಹೋರಾಟಕ್ಕೆ ಒಂದು ವರ್ಷ ಸಂದಿರುವ ಅಂಗವಾಗಿ ಬಾಡೂಟ ಬಳಗದ ವತಿಯಿಂದ ‘ಮಂಡ್ಯ ಮುನ್ನುಡಿ’ ಕಾರ್ಯಕ್ರಮವನ್ನು ಡಿ.23ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಘುನಾಥ ಚ.ಹ., ಚಿಂತಕ ಶಿವಸುಂದರ್, ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಪತ್ರಕರ್ತರಾದ ಬಿ.ಸಿ.ಬಸವರಾಜು, ಪಾರ್ವತೀಶ್ ಬಿಳಿದಾಳೆ, ಸಂಸ್ಕೃತಿ ಚಿಂತಕ ಉಗ್ರನರಸಿಂಹೇಗೌಡ, ಸಾಹಿತಿ ಗುರುಪ್ರಸಾದ್ ಕಂಟಲಗೆರೆ, ರಂಗಕರ್ಮಿ ಸಂತೋಷ್ ಗುಡ್ಡಿಯಂಗಡಿ ಭಾಗವಹಿಸಲಿದ್ದಾರೆ.

ಮಂಡ್ಯದ ಎಲ್ಲ ಹೋರಾಟದ ಮನಸುಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಾಡೂಟ ಬಳಗದ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಏನಿದು ಬಾಡೂಟ ಹೋರಾಟ?
ಒಂದೇ ಒಂದು ತುಂಡು ಬಾಡು ಒಕ್ಕಲಿಗ, ಕುರುಬ, ದಲಿತ, ಮತ್ತೊಬ್ಬ ಎಂದು ವಿಭಜಿಸದೆ ಇಡೀ ಶೂದ್ರ ಸಮುದಾಯವನ್ನು ಒಗ್ಗೂಡಿಸಿತು. ಜನರ ತೆರಿಗೆ ಹಣದಿಂದ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಅಘೋಷಿತವಾಗಿ ಜಾರಿಯಲ್ಲಿದ್ದ ‘ಮಾಂಸಾಹಾರ ನಿಷೇಧ’ವನ್ನು, ಬ್ರಾಹ್ಮಣ್ಯದ ಯಜಮಾನಿಕೆಯನ್ನು ಕೊನೆಗಾಣಿಸಿತು.
ಮಂಡ್ಯದ ಜನ ಎತ್ತಿದ ಆಹಾರ ಸಮಾನತೆಯ ಪುಟ್ಟ ಪ್ರಶ್ನೆ ಇಡೀ ರಾಜ್ಯವನ್ನು ಎಚ್ಚರಿಸಿತು. ಸಣ್ಣ ಕೂಗೊಂದು ದೊಡ್ಡ ಜನಚಳುವಳಿಯಾಗಿ ರೂಪುಗೊಂಡ ಪರಿಣಾಮ ರಾಜ್ಯ ಸರ್ಕಾರವೇ ಅಧಿಕೃತವಾಗಿ ಮೊಟ್ಟೆ ವಿತರಿಸಿತು. ಶೂದ್ರ ಸಮುದಾಯಗಳಿಗೆ ಇದೊಂದು ಐತಿಹಾಸಿಕ ಗೆಲುವು ಎಂದು ಪ್ರಜಾವಾಣಿ, ವಾರ್ತಾಭಾರತಿಯಂಥ ಪತ್ರಿಕೆಗಳು ಹೊಗಳಿದವು
ನಾಳೆ ಸಂಜೆ ಮಂಡ್ಯದ ಕರ್ನಾಟಕ ಸಂಘದಲ್ಲಿ ಬಾಡೂಟ ಬಳಗ ಆಯೋಜಿಸಿರುವ ಈ ‘ಮಂಡ್ಯ ಮುನ್ನುಡಿ’ ಕಾರ್ಯಕ್ರಮ ಶೂದ್ರ ಸಮುದಾಯಗಳನ್ನು ಒಗ್ಗೂಡಿಸಿ ಆಹಾರ ಸಮಾನತೆಯನ್ನು ಸಾಧಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀಡಿದ ಹೊಸ ಆಯಾಮಗಳನ್ನು, ದಿಕ್ಸೂಚಿಯನ್ನು ತೆರದಿಡಲಿದೆ.
ಮಂಡ್ಯದ ಪ್ರಜ್ಞಾವಂತ ಜನರ ಈ ಹೋರಾಟದ ಕುರಿತು ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಅನೇಕ ವಿದ್ವಾಂಸರು, ವಿಚಾರವಂತರು ಕನ್ನಡ ಸಾಹಿತ್ಯ ಪರಿಷತ್ತು ಸಾಗಬೇಕಿರುವ ದಾರಿ ಮತ್ತು ಆಹಾರ ಸಮಾನತೆಯ ಗುರಿಯ ಕುರಿತು ಮಾತನಾಡಲಿದ್ದಾರೆ. ನಾಳೆ ಸಂಜೆ ಬಿಡುವಿದ್ದವರು ಬನ್ನಿ. ವರ್ಷದ ನಂತರ ಒಂದೆಡೆ ಸೇರೋಣ.




