ಹನಿಯಂಬಾಡಿ ಜಗದೀಶ್
ಮಂಡ್ಯ ಸಾಂಸ್ಕೃತಿಕ ನೆಲದಲ್ಲಿ ಹಲವು ರಂಗಗಳಲ್ಲಿ ತನ್ನ ಕ್ರಿಯಾಶೀಲ ಚಟುವಟಿಕೆಯಿಂದಲೇ ಗುರುತಿಸಿಕೊಂಡಿರುವ ‘ಚಿತ್ರಕೂಟ’ ಸಂಸ್ಥೆಯು ನಂಜಮ್ಮ ಮೋಟೆಗೌಡ ಚಾರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ನೀಡುವ 2025ರ ವಿಶ್ವಮಾನವ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.
ಚಿತ್ರಕೂಟವು ಮಂಡ್ಯದಲ್ಲಿ ಹೊಸ ಸಂಚಲನವನ್ನು ಉಂಟು ಮಾಡುವ ಮೂಲಕ ಹಲವು ಯುವ ಮನಸ್ಸುಗಳನ್ನು ಒಗ್ಗೂಡಿಸಲು ಯಶಸ್ವಿಯಾಗಿದೆ. ಇದರೊಂದಿಗೆ ಹಲವರು ನಡೆಸುವ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಎಲೆಮರೆಕಾಯಿಯಂತೆ ತನ್ನ ಕಾಯಕದಲ್ಲಿ ನಿರತವಾಗಿದೆ.
ಜವಾಬ್ದಾರಿ ಹೆಚ್ಚಿಸಿದೆ
ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ‘ವಿಶ್ವಮಾನವ’ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜವಾಬ್ದಾರಿ ಹೆಚ್ಚಿಸಿದೆ. ನಗದು ಪುರಸ್ಕಾರ ಎಂದಾಗ ಭಯವಾಗಿತ್ತು. ಹೊಸತಲೆಮಾರಿಗೆ ಕುವೆಂಪು, ತೇಜಸ್ವಿ ಅವರ ಆಶಯಗಳು ಮತ್ತು ಪರಿಸರ ಪ್ರಜ್ಞೆಯನ್ನು ತಲುಪಿಸಲು ಈ ಹಣವನ್ನು ಬಳಸುತ್ತೇವೆ.
– ಅರವಿಂದ ಪ್ರಭು
ಮುಖ್ಯಸ್ಥರು, ಚಿತ್ರಕೂಟ ಸಾಂಸ್ಖೃತಿಕ ಸಂಸ್ಥೆ
ಮಂಡ್ಯ ತಾಲ್ಲೂಕಿನ ಆಲಕೆರೆ ರೈತರ ಶಾಲೆ ಉದ್ಘಾಟನೆ, ಬಾಡೂಟದ ಹೋರಾಟ, ಮತ್ತೆ ಮತ್ತೆ ಗಾಂಧಿ, ತೇಜಸ್ವಿ ಕಾರ್ಯಕ್ರಮ, ಚಿಕ್ಕಮಂಡ್ಯ ಶಾಲೆಗೆ ಬಣ್ಣ ಬಳಿಯುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ, ಈ ಕಾರ್ಯಗಳಲ್ಲಿ ಒಂದಷ್ಟು ನಾಡಿನ ಐಕಾನ್ ಗಳನ್ನು ಶಾಲೆಯಲ್ಲಿ ಬಿಡಿಸಿದ್ದಾರೆ, ಮುಂದಿನ ಪೀಳಿಗೆಗೆ ಪರಿಚಯಿಸಲು, ಚಿಕ್ಕ ಮಂಡ್ಯ ಸರ್ಕಾರಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಮಾಡಿದೆ.
ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಮಾನತೆಗಾಗಿ ನಡೆದ ‘ಬಾಡೂಟ’ ಹೋರಾಟದಲ್ಲಿ ‘ಚಿತ್ರಕೂಟ’ ತೊಡಗಿಸಿಕೊಂಡಿತ್ತು. ಮಂಡ್ಯ ಕಲಾಮಂದಿರದಲ್ಲಿ ನಡೆದ ‘ಸತ್ಯಾವತಾರ’ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದೆ, ಮಂಡ್ಯದ ನೂರಡಿ ರಸ್ತೆಯಲ್ಲಿ ಮರಗಳನ್ನು ಕಡಿದಾಗ ಪರಿಸರದ ಹೋರಾಟ ತೊಡಗಿಸಿಕೊಂಡಿ, ಭತ್ತದ ನಾಟಿ ಕಾರ್ಯ ಮುಯ್ಯಾಳು ಭಾಗವಾಗಿ ಅಲಕೆರೆಯಲ್ಲಿ ತೊಡಗಿಸಿಕೊಂಡು, ಪರಿಚಯ ಪ್ರಕಾಶನ ದೊಂದಿಗೆ 15 ದಿನಗಳಿಗೊಮ್ಮೆ ಓದು, ಚಿಂತನ ಮಂಥನ, ವಿಚಾರ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜತೆಯಾಗಿ ಸಕ್ಕರೆ ನೆಲೆದಲ್ಲಿ ನೀನಾಸಂ ನಾಟಕ ಪ್ರದರ್ಶನಗಳಿಗೆ ಸಹಕಾರ ನೀಡಿದೆ.
ಇಷ್ಟೇ ಅಲ್ಲದೇ ಸರ್ಕಾರಿ ಶಾಲೆ ಉಳಿಸಿ ಹೋರಾಟದ ಭಾಗವಾಗಿ, ಕನ್ನಡ ರಾಜ್ಯೋತ್ಸವದ ಆಯೋಜನೆ… ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ‘ಚಿತ್ರಕೂಟ’ ಜತೆಯಾಗಿದೆ ಎಂಬುದು ಗಮನಾರ್ಹ ವಿಚಾರವಾಗಿದೆ.
ಡಿ.28ರಂದು ಚಿತ್ರಕೂಟಕ್ಕೆ ಪ್ರಶಸ್ತಿ ಪ್ರದಾನ
ನಂಜಮ್ಮ ಮೋಟೆಗೌಡ ಚಾರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಕೊಪ್ಪ ಇವರು ಆಯೋಜಿಸಿರುವ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಘೋಷ ವಾಕ್ಯದೊಂದಿಗೆ ಕುವೆಂಪು ಜನ್ಮದಿನೋತ್ಸವ- ವಿಶ್ವಮಾನವ ಪ್ರಶಸ್ತಿ ಪ್ರಧಾನ- ಕುವೆಂಪು ವಿರಚಿತ ಗೀತ ಗಾಯನ ಸಮಾರಂಭವು ನಗರದ ರೈತ ಸಭಾಂಗಣದ ಎದುರು ಇರುವ ಕುವೆಂಪು ಪ್ರತಿಮೆ ಬಳಿ ಡಿ. 28ರಂದು ಬೆಳಿಗ್ಗೆ 8:30 ಕ್ಕೆ ಜರುಗಲಿದೆ.
ಟ್ರಸ್ಟ್ ಕೊಡ ಮಾಡುವ 2025ರ ವಿಶ್ವ ಮಾನವ ಪ್ರಶಸ್ತಿಗೆ ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಮಂಡ್ಯ ಆಯ್ಕೆಯಾಗಿದೆ, ಪ್ರತಿಭಾಂಜಲಿ ಸುಖಮ ಸಂಗೀತ ಅಕಾಡೆಮಿ ಗಾಯಕರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ
ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಂಘಟಕರು, ಯುವ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಲಿಂಗಣ್ಣ ಬಂದೂಕಾರ್, ಪ್ರೊ. ಜಯಪ್ರಕಾಶಗೌಡ, ತೈಲೂರು ವೆಂಕಟಕೃಷ್ಣ, ಧರಣೇಂದ್ರಯ್ಯ, ಪ್ರೊ. ಜಿ.ಟಿ.ವೀರಪ್ಪ, ಡಾ. ಹೆಚ್.ಎಸ್. ಮುದ್ದೇಗೌಡ, ಡಾ. ಪ್ರದೀಪ್ ಕುಮಾರ್ ಹೆಬ್ರಿ, ಜಿ.ವಿ. ನಾಗರಾಜು, ಸತೀಶ್ ಜವರೇಗೌಡ, ಸಿದ್ದು ಆರ್.ಜಿ. ಹಳ್ಳಿ, ಡಾ. ಕೃಷ್ಣಗೌಡ ಹುಸ್ಕೂರ್. ನವೀನ್ ಚಿಕ್ಕಮಂಡ್ಯ, ಎಂ.ಬಿ. ನಾಗಣ್ಣಗೌಡ, ಅಲೈ ಕೆ.ಆರ್. ಶಶಿಧರ ಈಚಗೆರೆ, ಅಲೈ ಕೆ.ಎಸ್. ಚಂದ್ರಶೇಖರ್, ಎಂ. ವಿನಯ್ ಕುಮಾರ್, ಲೋಕೇಶ್ ಚಂದಗಾಲು, ಮಂಗಲ ಯೋಗೇಶ್, ಮಂಗಲ ಲಂಕೇಶ್. ಆನಂದ್ ಪಿ. ಹೆಗಡೆ, ಜಿ. ಸಂತೋಷ್, ಕಾರಸವಾಡಿ ಮಹದೇವು, ಕೆಂಪರಾಜು, ರಕ್ಷಿತ್ರಾಜ್ ಟಿ.ಎನ್ ಹಾಗೂ ಎಂ.ಜಿ. ವಿನಯ್ ಕುಮಾರ್ ಭಾಗವಹಿಸಲಿದ್ದಾರೆ.



ಜವಾಬ್ದಾರಿ ಹೆಚ್ಚಿಸಿದೆ
