ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಭೆ ಆಯೋಜಿಸಿ, ಆಹ್ವಾನಿಸಿದರೆ ಮಂಡ್ಯ ವಿಧಾನಸಭ ಕ್ಷೇತ್ರದ ಎಲ್ಲ ಮಾಜಿ, ಹಾಲಿ ಶಾಸಕರನ್ನು ಸಭೆಗೆ ಕರೆತರುತ್ತೇನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ತರಲಾಗದೇ ರಾಜ್ಯ ಸರಕಾರವನ್ನು ಟೀಕಿಸುತ್ತಿದ್ದಾರೆ ಎನ್ನುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಹೇಳಿಕೆ ಬಾಲಿಶವಾದುದ್ದು. ರಾಜ್ಯ ಸರಕಾರ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗುವಂತೆ ತಾಕೀತು ಮಾಡಿದರು.
ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಗಳ ನಡುವೆ ಪೈಪೋಟೊ ಹೆಚ್ಚಾಗಿದೆ. ಈ ನಡುವೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸರಕಾರ ಎಡವಿದೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಮಂಡ್ಯ ಜಿಲ್ಲೆ ಸೂಕ್ತವಾಗಿದೆ. ಆದರೆ ಇಲ್ಲಿ ಕೈಗಾರಿಕೆ ಸ್ಥಾಪಿಸಿ, ಉದ್ಯೋಗಾವಕಾಶ ಸೃಷ್ಠಿಸಲು ಸರಕಾರ ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ಮಂಡ್ಯ ಜಿಲ್ಲೆ ಬೆಂಗಳೂರು- ಮೈಸೂರು ಜಿಲ್ಲೆಗಳ ನಡುವಿನಲ್ಲಿದೆ. ಅಷ್ಟ ಪಥದ ರಸ್ತೆ, ದ್ವಿಪಥ ರೈಲು ಸಂಚಾರ ವ್ಯವಸ್ಥೆ, ನೀರಾವರಿ ಸೌಲಭ್ಯವಿದ್ದರೂ. ಕೈಗಾರಿಕೆಗೆ ಸೂಕ್ತ ಅವಕಾಶ ನಿರ್ಮಿಸಿಕೊqಲು ಕಾಂಗ್ರೆಸ್ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.
ಮಿಮ್ಸ್ಗೆ ಸಂಬಂಧ ಪಟ್ಟ ಸ್ಥಳ ಒತ್ತುವರಿ ತೆರವಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಇಚ್ಚಾಸಕ್ತಿ ತೋರುತ್ತಿಲ್ಲ. ಅವರಿಗೆ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವುದು ಬೇಕಾಗಿಲ್ಲ. ಆದ್ದರಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೇಂದ್ರ ಬೃಹತ್ ಕೈಗಾರಿಕಾ ಸಚಿವರನ್ನು ಭೇಟಿ ಮಾಡುತ್ತಿರುವ ದೇಶದ ಇತರೇ ರಾಜ್ಯಗಳ ಸರಕಾರಗಳು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಜಿಲ್ಲೆಯಿಂದ ಆಯ್ಕೆಯಾದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಉದ್ಯೋಗ ಸಮಸ್ಯೆ ಬಗೆಹರಿಸಲು ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಅವರು ಕೇಂದ್ರ ಸಚಿವರ ಬಳಿಗೆ ತೆರಳಬೇಕೋ ಅಥವಾ ಕೇಂದ್ರ ಸಚಿವರೇ ಇವರ ಬಳಿಗೆ ಬರಬೇಕೋ. ಅವರು ಬಾರದೇ ಇದ್ದರೂ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು. ಆದರೆ ಜಿಲ್ಲಾ ಮಂತ್ರಿಗಳಾಗಿ ಸಭ್ಯತೆ ತೋರಬೇಕೆಂದರು.
೨೦೦೪ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿ ಆದಮೇಲೆ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು, ಐಟಿ ಕಾಲೇಜುಗಳು, ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಏನು ಮಾಡಬೇಕು ಅದಕ್ಕೆ ರಾಜ್ಯ ಸರಕಾರ ಏನು ಸವಲತ್ತು ನೀಡಬೇಕು ಎಂದು ಚರ್ಚಿಸಲು ಸಭೆ ಆಯೋಜಿಸುವಂತೆ ಸಲಹೆ ನೀಡಿದರು.
ಬಾಯಿ ಇದೆ ಎಂಬ ಕಾರಣಕ್ಕೆ ಪತ್ರಕರ್ತರಿಗೆ ಬೆದರಿಕೆಯೊಡ್ಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟ ಬಂದಂತೆ ಮಾತನಾಡ ಮಾತನಾಡಬೇಡಿ. ಅಧಿಕಾರ ಶಾಶ್ವತವಲ್ಲ. ಧರ್ಪ ಬಿಟ್ಟು ಸೌಜನ್ಯದಿಂದ ನಡೆದುಕೊಳ್ಳುವಂತೆ ಎಚ್ಚರಿಸಿದರು.
ಮಾಜಿ ಶಾಸಕ ಕೆ.ಸುರೇಶ್ಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ನಾನಿರುವ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅಧಿಕಾರದಲ್ಲಿದ್ದು ಇದೀಗ ಬಹಳ ಎತ್ತರದಲ್ಲಿದ್ದಾರೆ. ಅವರು ಪತ್ರಕರ್ತರೊಂದಿಗೆ ನಡೆದುಕೊಂಡ ರೀತಿ ಅವರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದರು.
ಮಳವಳ್ಳಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ದೊರೆತ ಗೌರವ, ಚಪ್ಪಾಳೆ, ಸೀಟಿಗಳ ಜೈಕಾರದ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮಗಳ ಮೇಲೆ ಕೋಪ ತೋರಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸಚಿವರ ಸಹಕಾರ ಬೇಡ ಎಂದು ರಾಜ್ಯ ಸರಕಾರ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಮಂಡ್ಯ ಜಿಲ್ಲೆಯಲ್ಲಿ ಆಡಳಿತಯಂತ್ರ ಸತ್ತಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು- ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರಕಾರದಿಂದ ವೇತನ ದೊರೆಯುತ್ತದೆಯೋ, ಅಥವಾ ರಾಜ್ಯದ ಸಚಿವರೇ ವೇತನ ನೀಡುತ್ತಿದ್ದಾರೆಯೋ ತಿಳಿಯದಾಗಿದೆ. ನಾಗಮಂಗಲದಲ್ಲಿ ಸಾವಿರಾರು ಕೋಟಿ ರೂ ಮೌಲ್ಯದ ಗಣಿ ಲೂಟಿ ಮಾಡಲಾಗುತ್ತಿದೆ. ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಜಿಲ್ಲೆಯ ಅಧಿಕಾರಿಗಳೇ ರಸ್ತೆ ಮಾಡಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಗಮಂಗಲದಲ್ಲಿ ೪೬೦೦ ಎಕರೆ ಭೂಮಿಯನ್ನು ಬೇಕಾದವರಿಗೆ ಮಂಜೂರು ಮಾಡಿಕೊಡಲಾಗುತ್ತಿದೆ. ಸ್ಥಳೀಐ ಗುತ್ತಿಗೆದಾರರಿಗೆ ಟೆಂಡರ್ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಗುತ್ತಿಗೆದಾರರು ಸಾಯುವಂತಾಗಿದ್ದರೂ ಜಿಲ್ಲಾಧಿಕಾರಿಗಳು ಸುಮ್ಮನಿದ್ದಾರೆ. ಆಡಳಿತ ವ್ಯವಸ್ಥೆ ಜಿಲ್ಲೆಯಲ್ಲಿ ರೋಲ್ಕಾಲ್ ಕೆಲಸ ಮಾಡುತ್ತಿದೆ ಎಂದು ದೂರಿದರು.
ತುರವೇಕೆರೆಯಿಂದ ನಾಗಮಂಗಲ ರಸ್ತೆ ಆಧುನೀಕರಣ ಗುತ್ತಿಗೆಯನ್ನು ಸ್ಥಳಿಯ ಗುತ್ತಿಗೆದಾರರರಿಗೆ ನೀಡದೇ ಅನ್ಯರಿಗೆ ನೀಡಲಾಗುತ್ತಿದೆ. ಬೇನಾಮಿಯಾಗಿ ತಾವೇ ಗುತ್ತಿಗೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಾಗಮಂಗಲ ಕ್ಷೇತ್ರಕ್ಕೆ ತಾವು ವಿಪಕ್ಷದಲ್ಲಿದ್ದರೂ ಹೋರಾಡಿ ತಂದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳವಷ್ಟರಲ್ಲಿ ಚುನಾವಣೆ ನಡೆದು ಅಧಿಕಾರಕ್ಕೆ ಬಂದು ಸಚಿವರು ತಮ್ಮದೆನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಒದಗಿಸಲು ಸರಕಾರಕ್ಕೆ ನಾನೆ ಪತ್ರ ಬರೆದಿದ್ದು, ಅದನ್ನು ಯಾರೋ ಶಾಸಕ ಎನ್ನಲಾಗುತ್ತಿದೆ. ಜಿಲ್ಲೆಗೆ ಕೈಗಾರಿಕೆಗಳ ಬಂದಲ್ಲಿ ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಹೆಸರು ಬರಲಿದೆ ಎಂಬ ಕಾರಣಕ್ಕೆ ಸರಕಾರ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು, ಬೀಮ್ ಆರ್ಮಿ ಸಂಘಟನೆಯ ಅಂದಾನಿ ಇದ್ದರು.




