ದೇಶದ ಅತ್ಯುನ್ನತ ನಾಗರೀಕ ಗೌರವವಾದ ಪದ್ಮ ಪ್ರಶಸ್ತಿಗೆ ಮೂರು ಕನ್ನಡಿಗರು ಆಯ್ಕೆಯಾಗಿದ್ದು ಪುಸ್ತಕಗಳೇ ತಮ್ಮ ಪ್ರಪಂಚ ಎಂದು ಕೊಂಡು ಲಕ್ಷಾಂತರ ಪುಸ್ತಕ ಸಂಗ್ರಹಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಒಟ್ಟು 45 ಮಂದಿಗೆ ಪ್ರಶಸ್ತಿ ನೀಡಿದ್ದು, ಆ ಪೈಕಿ ಮಂಡ್ಯದ ಅಂಕೇಗೌಡ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಮಂಡ್ಯ ಜಿಲ್ಲಾಧಿಕಾರಿ ಅಭಿನಂದನೆ
ಭಾರತದ ನಾಲ್ಕನೇ ಸರ್ವ ಶ್ರೇಷ್ಠ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಂಕೇಗೌಡರಿಗೆ ಲಭಿಸಿದೆ.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಅಂಕೇಗೌಡ ಅವರ ಪರಿಚಯ
ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ ‘ಪುಸ್ತಕದ ಮನೆ’ಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ. ಅಂಕೇ ಗೌಡರು, ಸುಮಾರು ನಾಲ್ಕು ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿದ್ದಾರೆ. ತಮ್ಮ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟು, ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನೂ ಮಾರಿದ ಅಂಕೇಗೌಡರು, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಈ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಆಯ್ಕೆ ಮಾಡಿದೆ.




