ಮಂಡ್ಯ ಜಿಲ್ಲೆಯಲ್ಲಿ ಒಟ್ಟು 750 ಕುಟುಂಬಗಳು ಮಾರ್ಗದರ್ಶಕರಾಗಿ ಕೈಮಗ್ಗದ ಕೆಲಸವನ್ನು ಮಾಡುತ್ತ ಕೈಮಗ್ಗ ಉದ್ಯಮ ಬೆಳೆಸುತ್ತಿದ್ದು, ನಶಿಸಿಹೋಗುತ್ತಿರುವ ಮಾನವ ಶ್ರಮಕ್ಕೆ ಕೈಮಗ್ಗದಂತಹ ವಿಶೇಷವಾದ ಕೊಡುಗೆ ನೀಡಲು ಮಂಡ್ಯ ಜಿಲ್ಲೆ ಪ್ರಶಸ್ತ ಸ್ಥಳ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್. ಎಲ್ ನಾಗರಾಜು ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಭವನದಲ್ಲಿ ನಡೆದ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಉದ್ಘಾಟಿಸಿ ಅವರು ಮಾತನಾಡಿದರು.
1905 ರಲ್ಲಿ ಸ್ವದೇಶಿ ಮತ್ತು ಸ್ವರಾಜ್ಯ ಹೋರಾಟ ಶುರುವಾಗಿತ್ತು. ಮಹಾತ್ಮ ಗಾಂಧಿಯವರು ದೇಶದ ಆರ್ಥಿಕ ವ್ಯವಸ್ಥೆಗೆ ಚರಕವನ್ನು ಒಂದು ಸಂಕೇತವಾಗಿ ಇಡುತ್ತಾರೆ.ದುಡಿಯುವವರ ಕೈಗೆ ಮೊದಲು ಕೆಲಸ ಕೊಡಬೇಕು. ದುಡಿಮೆಯಿಂದ ಆಹಾರ ಸೇವಿಸ ಬೇಕು. ದುಡಿಯುವವರ ಕೈಗೆ ಕೆಲಸ ಕೊಡಿ ಹಾಗೂ ಮಾನವ ಶ್ರಮಕ್ಕೆ ಗೌರವ ಕೊಡಬೇಕು ಎಂದರು.
ಸಾಮಾನ್ಯ ಹಾಗೂ ಗ್ರಾಮೀಣ ಜನರ ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು, ವರಮಾನ ಸಿಗಬೇಕು. ಇದಕ್ಕಾಗಿ ಮೊದಲು ಸ್ವಾತಂತ್ರ್ಯ ಸಿಗಬೇಕು. 1905ರಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲಿ ಸ್ವದೇಶಿ ಕೂಡ ಪ್ರಾರಂಭವಾಗುತ್ತದೆ ಎಂದರು.

ನಾವು ದಿನನಿತ್ಯ ಬಳಸುವ ಖಾದಿ ಬಟ್ಟೆಗಳನ್ನು ನಾವೇ ಉತ್ಪಾದನೆ ಮಾಡಿಕೊಳ್ಳಬೇಕು. ಇದರಿಂದ ಉದ್ಯೋಗ ದೊರಕಿ ವರಮಾನ ಸಿಗುತ್ತದೆ. ನಮ್ಮಲ್ಲಿರುವ ಸಂಪನ್ಮೂಲಗಳು ನಮ್ಮಲ್ಲಿಯೇ ಬಳಕೆಯಾಗಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಶಿವಲಿಂಗಯ್ಯರವರು ಮಾತನಾಡಿ, ಸ್ವದೇಶಿ ಉಡುಪುಗಳು ಹೆಚ್ಚು ಉತ್ಪಾದನೆಮಾಗಬೇಕು. ಆಮದು ಕಡಿಮೆ ಮಾಡಬೇಕು.ರಪ್ತು ಹೆಚ್ಚಾಗಬೇಕು. ಪ್ರತಿಯೊಂದು ಮನೆಯಲ್ಲೂ ಕೈಮಗ್ಗ ನೇಕಾರರು ಇರಬೇಕು. ಇದರಿಂದ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುತ್ತದೆ ಎಂದರು.
ಜಿಲ್ಲೆಯಲ್ಲಿ ಮಳವಳ್ಳಿ ತಾಲ್ಲೂಕಿನ ತಳಗವಾದಿ, ಗುಂಡಾಪುರ, ಪಾಂಡವಪುರ ತಾಲ್ಲೂಕಿನ ಮೇಲುಕೋಟೆ, ಕೆ.ಆರ್ .ಪೇಟೆ ತಾಲ್ಲೂಕಿನ ಹೊಸಹೊಳಲು, ಕೊರಟಗೆರೆ, ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ, ಗಾಮನಹಳ್ಳಿ, ಮದ್ದೂರು ತಾಲ್ಲೂಕಿನ ಅಡಗನಹಳ್ಳಿ, ಮಂಡ್ಯ ತಾಲ್ಲೂಕಿನ ಸೂನಗಹಳ್ಳಿ, ಇಂಡುವಾಳು ಗ್ರಾಮಗಳಲ್ಲಿ ಜನರು ಕೈಮಗ್ಗದ ಮೇಲೆ ಅವಲಂಬಿತರಾಗಿ ಕಾರ್ಯನಿರತರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸುಮಾರು 150 ಕೈಮಗ್ಗ ನೇಕಾರರು ಸಹಕಾರ ಸಂಘಗಳಲ್ಲಿ ಹಾಗೂ ಕೆ.ಹೆಚ್.ಡಿ.ಸಿ ಉಪಕೇಂದ್ರಗಳಲ್ಲಿ ಕಾರ್ಯ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ 09 ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಒಟ್ಟು 2374 ಮಂದಿ ನೋಂದಾಯಿತ ಸದಸ್ಯರಾಗಿದ್ದಾರೆ ಎಂದರು.
ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಕೆ ಮಾಡಿದರೆ ಸ್ವಾತಂತ್ರ್ಯಕ್ಕೆ ಗೌರವ ಹೆಚ್ಚಾಗುತ್ತದೆ ಎಂಬ ಉದ್ದೇಶಗೊಸ್ಕರ ಮಹಾತ್ಮ ಗಾಂಧಿಜೀಯವರು ದೇಶದ ಗ್ರಾಮೀಣ ಆರ್ಥಿಕ ವ್ಯವಸ್ಥೆಗೆ ಚರಕವನ್ನು ಐಕ್ಯತೆಯಾಗಿ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಗಂಗಯ್ಯ,ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕ ದೀಪಕ್ , ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಹರ್ಷಿತ ಬಿ.ವಿ, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಕೆ.ಶ್ರೀ ವಾಣಿ, ಆರ್ ಸಿಟಿ ನಿರ್ದೇಶಕ ವಿವೇಕ್, ಮುಡಾ ಮಾಜಿ ಅಧ್ಯಕ್ಷ ಬಸವೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




