ಅಬ್ಬಾ… ಹಾವು ಎಂದೊಡನೆ ಮನುಷ್ಯನಲ್ಲಿ ಭಯ ಉಂಟಾಗುತ್ತದೆ.ಅದರಲ್ಲೂ ನಾಗರಹಾವು ಎಂದರೆ ಭಯ ಇನ್ನೂ ಹೆಚ್ಚು. ಅಂತಹ ನಾಗರಹಾವಿನ ಕಡಿತದಿಂದ ಬಚಾವಾಗುವುದು ಎಂದರೆ ಪುನರ್ಜನ್ಮ ಸಿಕ್ಕ ಹಾಗೆ.
ಮಂಡ್ಯ ನಗರದ ಚಾಮುಂಡೇಶ್ವರಿ ನಗರದಲ್ಲಿ ನಾಗರಹಾವಿನ ಕಡಿತದಿಂದ ಸ್ವಲ್ಪದರಲ್ಲೇ ಪಾರಾದ ಬಾಲಕನ ವೀಡಿಯೋ ನೋಡುತ್ತಿದ್ದರೆ ಭಯದಿಂದ ಮೈ ಜುಮ್ಮೆನ್ನುತ್ತದೆ.
ತಾಯಿಯ ಸಮಯಪ್ರಜ್ಞೆ ಹಾಗೂ ಸಾಹಸದಿಂದ ಬಾಲಕ ಸ್ವಲ್ಪದರಲ್ಲೇ ನಾಗರ ಹಾವಿನ ಕಡಿತದಿಂದ ಬಚಾವಾಗಿದ್ದಾನೆ.
ಕೆ.ಎಂ.ದೊಡ್ಡಿ ವೈದ್ಯ ಡಾ.ವಿಷ್ಣು ಪ್ರಸಾದ್ ಮತ್ತು ಪ್ರಿಯಾ ದಂಪತಿ ಪುತ್ರ ನಾಗರಹಾವಿನ ಕಡಿತದಿಂದ ಪಾರಾಗಿದ್ದಾನೆ. ಚಾಮುಂಡೇಶ್ವರಿ ನಗರದ ಮನೆ ಬಾಗಿಲ ಮೆಟ್ಟಿಲಿನ ಬಳಿ ನಾಗರಹಾವೊಂದು ಹರಿದುಬಂದಿದ್ದು,ತಾಯಿಯ ಜೊತೆಗೆ ಮನೆಯ ಬಾಗಿಲು ದಾಟಲು ಬಂದ ಬಾಲಕ ಮೆಟ್ಟಿಲಿನ ಕೆಳಗೆ ಹಾವನ್ನು ಗಮನಿಸದೆ ಹೆಜ್ಜೆ ಇಟ್ಟಿದ್ದಾನೆ.
ನಾಗರಹಾವು ಕ್ಷಣಮಾತ್ರದಲ್ಲಿ ಹಿಂದೆ ಸರಿದಿದೆ. ತಾಯಿಗೆ ನಾಗರಹಾವು ಕಾಣಿಸಿದೆ. ಇತ್ತ ತಾಯಿ ಬರಲಿಲ್ಲ ಎಂದು ಬಾಲಕ ಮತ್ತೆ ಹಿಂದಕ್ಕೆ ತಿರುಗಿ ಮನೆಯೊಳಗೆ ಓಡಲು ಹೋಗುತ್ತಿದ್ದಂತೆ ತಾಯಿ ಪ್ರಿಯಾ ಮಗನನ್ನು ಬರಸೆಳೆದು ಬಿಗಿದಪ್ಪಿಕೊಂಡು ಹೆಡೆಯೆತ್ತಿ ನಿಂತಿದ್ದ ನಾಗರಹಾವಿನ ಕಡಿತದಿಂದ ಪಾರು ಮಾಡಿದ್ದಾರೆ.
ನಾಗರಹಾವು ಹೆಡೆಯೆತ್ತಿ ನಿಂತಿದ್ದ ಎದೆ ಝಲ್ ಎನ್ನಿಸುವ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಯಿ ಪ್ರಿಯಾ ಅವರ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾಲಕನ ತಂದೆ ಡಾ.ವಿಷ್ಣುಪ್ರಸಾದ್ ಅಂದು ಬೆಳಗಿನ ಜಾವ 11 ರಿಂದ 11.30 ರ ಸುಮಾರಿಗೆ ಈ ಘಟನೆ ನಡೆದಿದೆ.ನನ್ನ ಪತ್ನಿ ಕಿರುಚಿದ ಸದ್ದಿಗೆ ನಾನು ಹೋಗಿ ನೋಡಿದಾಗ ನಾಗರಹಾವು ಹೊರಗೆ ಹೋಗುತ್ತಿತ್ತು.
ನಮ್ಮ ಮನೆಯ ಪಕ್ಕ ಖಾಲಿ ಜಾಗ ಇದ್ದು ಹಾವು ಅಲ್ಲಿಂದ ಬಂದಿರಬಹುದು. ದೇವರ ದಯೆಯಿಂದ ನನ್ನ ಮಗ ಹಾವಿನ ಮೇಲೆ ಕಾಲು ಹಾಕಿದರೂ ಕಡಿತದಿಂದ ಪಾರಾಗಿದ್ದಾನೆ. ಮಹದೇಶ್ವರ ಸ್ವಾಮಿಯ ದಯೆಯಿಂದ ನನ್ನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.




