ಮಂಡ್ಯನಗರದ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿರುವುದಕ್ಕೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ( AILU) ಮಂಡ್ಯ ಜಿಲ್ಲಾ ಘಟಕ ತೀವ್ರ ಆತಂಕ ಮತ್ತು ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಹಿರಿಯ ವಕೀಲ ಹಾಗೂ AILU ಜಿಲ್ಲಾಧ್ಯಕ್ಷರಾದ ಬಿ.ಟಿ.ವಿಶ್ವನಾಥ್ ಹಾಗೂ ಕಾರ್ಯದರ್ಶಿ ಚಂದನ್ ಅವರು, ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನ್ಯಾಯಾಲಯ ಸಂಕೀರ್ಣಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದಾರೆ.
ಮಂಡ್ಯ ನ್ಯಾಯಾಲಯದ ಸಂಕೀರ್ಣದಲ್ಲಿ ಇಲಾಖೆಯು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ, ನ್ಯಾಯಾಲಯದ ಆವರಣದಲ್ಲಿ ವಕೀಲರು, ಕಕ್ಷಿದಾರರ ವಾಹನಗಳಲ್ಲದೇ ಯಾರ್ಯಾರೋ ದಾರಿಹೋಕರು, ಅನಾಮಧೇಯರು ವಾಹನ ನಿಲುಗಡೆ ಮಾಡುತ್ತಿದ್ದಾರೆ. ಒಂದು ವೇಳೆ ಇಂತಹ ವಾಹನಗಳಲ್ಲಿ ಸ್ಟೋಟಕಗಳನ್ನು ಇಟ್ಟರೇ ಯಾರು ಜವಾಬ್ದಾರರು ? ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ ಕೆಲಸಗಳು ನಡೆಯುತ್ತಿದ್ದು, ಯಾರೋ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಮತ್ಯಾರೋ ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಉತ್ತರಿಸಲು ಇಂತಹ ಪಾತಕಗಳಲ್ಲಿ ತೊಡಗಿದರೆ ಬಲಿಯಾಗುವವರು ಆಮಾನಕರಾಗಿರುತ್ತಾರೆಯೇ ಹೊರತು, ಕೃತ್ಯವೆಸಗಿದವರಲ್ಲ ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಮುಖ್ಯದ್ವಾರಗಳಲ್ಲಿ ಪರೀಕ್ಷಕ ಯಂತ್ರಗಳನ್ನು ಇಟ್ಟು ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳಗೆ ಬಿಡುವಂತಹ ವ್ಯವಸ್ಥೆ ಮಾಡಬೇಕು. ಅಲ್ಲದೇ ವಕೀಲರು, ಕಕ್ಷಿದಾರರಲ್ಲದೇ ಅನಾಮಧೇಯ ವಾಹನಗಳು ನ್ಯಾಯಾಯದ ಆವರಣ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.




