ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಕಚೇರಿ ರಸ್ತೆಯ ಬಳಿ ಭಾನುವಾರ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರು ರಸ್ತೆಯಲ್ಲಿ ಇದ್ದ ಗುಂಡಿ (pot holes)ಗಳನ್ನು ಮುಚ್ಚಿಸುತ್ತಿದ್ದರು.
ಮಂಡ್ಯ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಅವರ ಮನೆಯ ಮುಂಭಾಗದ ಪಿಇಎಸ್ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹಲವು ಗುಂಡಿಗಳಿವೆ. ಶಾಸಕ ಎಂ.ಶ್ರೀನಿವಾಸ್ ಅವರು ಈ ಗುಂಡಿ ಬಿದ್ದ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಇಂತಹ ಗುಂಡಿ ಬಿದ್ದ ರಸ್ತೆಯನ್ನು ಭಾನುವಾರ ಪಿಡಬ್ಲ್ಯೂಡಿ ಇಂಜಿನಿಯರ್ ಒಬ್ಬರು ಅವೈಜ್ಞಾನಿಕವಾಗಿ ಮುಚ್ಚಿಸುತ್ತಿದ್ದಾರೆ ಬಂದು ನೋಡಿ ಎಂದು ಸಾರ್ವಜನಿಕರೊಬ್ಬರು ನುಡಿ ಕರ್ನಾಟಕ. ಕಾಮ್ ಗೆ ಕರೆ ಮಾಡಿದ್ದರು.

ಅದರಂತೆ ಅಲ್ಲಿ ಹೋಗಿ ನೋಡಿದಾಗ ಇಂಜಿನಿಯರ್ ಆಗಷ್ಟೇ ಸ್ಥಳದಿಂದ ತೆರಳಿದ್ದರು. ಅಲ್ಲಿ ಗುತ್ತಿಗೆದಾರ ಕೂಡ ಇರಲಿಲ್ಲ. ಗುತ್ತಿಗೆದಾರನ ಕೆಲಸಗಾರರು ಗುಂಡಿಯಲ್ಲಿರುವ ಮಣ್ಣನ್ನು ತೆಗೆದು ಅದರ ಮೇಲೆ ಎಮಲ್ಶನ್ ಹಾಕಿ ರೆಡಿ ಮಿಕ್ಸ್ ಚಿಪ್ ಕಾರ್ಪೆಟ್ ಹಾಕಿ ಅದರ ಮೇಲೆ ರೋಡ್ ರೋಲರ್ ಮೂಲಕ ಸರಿಯಾಗಿ ಸಮತಟ್ಟು ಮಾಡಿಸದೆ ಹೋಗಲಾಗುತ್ತಿತ್ತು. ಈ ಬಗ್ಗೆ ಕೇಳಿದಾಗ ಜಕ್ಕನಹಳ್ಳಿ ಭಾಗದ ವ್ಯಕ್ತಿ ಗುತ್ತಿಗೆದಾರ ಎಂಬುದು ತಿಳಿದುಬಂತು.

ಈ ರಸ್ತೆಯಲ್ಲಿ ಗುಂಡಿಗಳನ್ನು ವರ್ಷದಲ್ಲಿ ಮೂರು-ನಾಲ್ಕು ಬಾರಿ ಇದೇ ರೀತಿ ಅವೈಜ್ಞಾನಿಕವಾಗಿ ಮುಚ್ಚಲಾಗುತ್ತದೆ. ಅದು ಕೆಲವೇ ದಿನಗಳಲ್ಲಿ ಭಾರೀ ಮಳೆಗೆ, ವಾಹನಗಳ ಭಾರಕ್ಕೆ ಸಿಲುಕಿ ಮತ್ತೆ ಗುಂಡಿಗಳಾಗುತ್ತದೆ.
ಈಗಾಗಲೇ ಹಲವು ಬಾರಿ ಈ ರಸ್ತೆಯಲ್ಲಿನ ಗುಂಡಿಗಳಿಗೆ ತೇಪೆ ಹಾಕೋದು, ಅದು ಕೆಲವೇ ದಿನಕ್ಕೆ ಕಿತ್ತು ಬರೋದು, ಮತ್ತೆ ತೇಪೆ ಹಾಕೋದು,ಮತ್ತೆ ಗುತ್ತಿಗೆದಾರನ ಜೇಬು ತುಂಬಿಸುವುದು, ಇಂಜಿನಿಯರ್ ಒಂದಷ್ಷು ಹಾಕಿಕೊಳ್ಳೋದು ನಡೆಯುತ್ತಿದೆ.
ವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಬೇಕಾದರೆ ಮೊದಲು, ಗುಂಡಿಯಲ್ಲಿರುವ ಕಲ್ಲು, ಮಣ್ಣನ್ನು ಸಂಪೂರ್ಣವಾಗಿ ತೆಗೆದು ಅದನ್ನು ಚೌಕಾಕಾರದಲ್ಲಿ ಕತ್ತರಿಸಿಕೊಂಡು ನಂತರ ಅದಕ್ಕೆ ಮೊದಲು ವೆಟ್ ಮಿಕ್ಸ್, ಬಿಎಮ್ ಹಾಕಿದ ಮೇಲೆ ಎಸ್ಟಿಬಿಸಿ ಹಾಕಿ ನಂತರ ಅದರ ಮೇಲೆ ಎಮಲ್ಶನ್ ಹಾಕಿ ರಸ್ತೆಗೆ ಸಮತಟ್ಟಾಗಿ ಬರುವಂತೆ ಬುಲ್ಡೋಜರ್ ನಲ್ಲಿ ರೋಲ್ ಮಾಡಿಸಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೆ ಧೂಳು ತೆಗೆದು ಎಮಲ್ಶನ್ ಮಾತ್ರ ಹಾಕಿ ರೆಡಿಮಿಕ್ಸ್ ಚಿಪ್ ಕಾರ್ಪೆಟ್ ಹಾಕಿ ಬುಲ್ಡೋಜರ್ ಮಾಡಲಾಗುತ್ತಿತ್ತು. ಇದು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬೀಳುತ್ತೆ ಎಂದು ನಿವೃತ್ತ ಇಂಜಿನಿಯರ್ ರೊಬ್ಬರು ನುಡಿ ಕರ್ನಾಟಕ. ಕಾಮ್ ಗೆ ತಿಳಿಸಿದರು.
ಈ ರಸ್ತೆಯಲ್ಲಿ ಈಗಾಗಲೇ 4-5 ಬಾರಿ ಇದೇ ರೀತಿ ತೇಪೆ ಹಾಕಲಾಗಿದೆ. ಅದು ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬೀಳುತ್ತದೆ. ಶಾಸಕ ಎಂ.ಶ್ರೀನಿವಾಸ್ ಅವರ ಮನೆಯ ಮುಂದೆಯೇ ಪರ್ಮನೆಂಟಾದ ಟಾರ್ ರಸ್ತೆ ಹಾಕಿ ಎಂದರೆ ಈ ರೀತಿಯ ಅವೈಜ್ಞಾನಿಕವಾಗಿ ಪ್ಯಾಚ್(ತೇಪೆ) ಹಾಕಿರುವುದು ಎಷ್ಟು ಸರಿ ಎಂದು ಸುಬ್ರಹ್ಮಣ್ಯ ಅವರು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಬರುವ ಎರಡು ರಸ್ತೆಗಳು ತೀವ್ರವಾಗಿ ಗುಂಡಿ ಬಿದ್ದು ಜನರು ಓಡಾಡುವುದೇ ದುಸ್ತರವಾಗಿತ್ತು. ಸಾರ್ವಜನಿಕರು ಕೂಡ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯೇ ಗುಂಡಿಗಳಿಂದ ಕೂಡಿದ್ದು,ಇದು ಜಿಲ್ಲೆಯ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಈ ಎರಡು ರಸ್ತೆಗಳಿಗೆ ಟಾರು ಹಾಕಿ ಅಭಿವೃದ್ಧಿ ಮಾಡಲಾಗಿದೆ. ಆದರೆ ಜಿಲ್ಲಾ ಪಂಚಾಯತ್ ಸಿಇಓ ತೆರಳುವ ರಸ್ತೆಯಲ್ಲಿ ಪರ್ಮನೆಂಟಾಗಿ ಟಾರು ಹಾಕದೆ ಪ್ಯಾಚ್ ಹಾಕಿ ತೇಪೆ ಹಾಕಲಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.




