ರಾಜ್ಯದಲ್ಲಿ ಗ್ಯಾರೆಂಟಿಯ ವಾತಾವರಣ ಸೃಷ್ಠಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ರಾಜ್ಯದಲ್ಲಿ ಗ್ಯಾರೆಂಟಿಗಳನ್ನು ಹುಸಿ ಮಾಡಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಯಾವುದಾದರೊಂದು ಚುನಾವಣೆ ಬಂದಾಗ ಮಾತ್ರ ಖಾತೆಗೆ ಹಣ ಜಮಾವಣೆ ಮಾಡುವುದು, ಗೃಹ ಜ್ಯೋತಿ ಯೋಜನೆಯಲ್ಲಿ ಸುಳ್ಳಿನ ಮೂಲಕ ವಿದ್ಯುತ್ ವಂಚನೆ, ಶಕ್ತಿ ಯೋಜನೆ ಜಾರಿ ಮಾಡಿ ಹೊಸ ಬಸ್ ನೀಡದೇ, ಇರುವ ಬಸ್‌ಗಳ ನಿರ್ವಹಣೆಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಎಸ್‌ಆರ್‌ಟಿಸಿ ಮುಳುಗುವ ಸ್ಥಿತಿಯಲ್ಲಿದೆ. ಯುವನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನೇ ಮಾಡಿಲ್ಲ. ಇಂದಿನವರೆಗೂ ಸಮರ್ಪಕವಾಗಿ ಚಾಲನೆಯಾಗಿಲ್ಲ ಎಂದು ಆರೋಪಿಸಿದರು.
ಬರಿ ಸುಳ್ಳಿನಿಂದಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ೧೦೦೦ ದಿನಗಳಲ್ಲಿ ಸುಳ್ಳಿನಲ್ಲೆ ಆಡಳಿತ ನಡೆಸುತ್ತಿದ್ದಾರೆ. ಮೈಸೂರು ಮುಡಾದಲ್ಲಿ ೩೫೦೦ ಕೋಟಿ ಹಗರಣ, ೧೭೮ ಕೋಟಿ ವಾಲ್ಮೀಕಿ ಹಗರಣ, ವಕ್ಫ್ ಮಂಡಳಿಗೆ ೪ ಕೋಟಿ ಅಕ್ರಮ ವರ್ಗಾವಣೆ, ೧೧ ಇಲಾಖೆ, ೯ ನಿಗಮಗಳಲ್ಲಿ ೪೨.೮೮ ಕೋಟಿ ದುರುಪಯೋಗ ಸೇರಿದಂತೆ ಎಣಿಕೆಯಿಲ್ಲದಟ್ಟು ಹಗರಣಗಳಲ್ಲಿ ಮುಳುಗಿದೆ ಎಂದು ದೂರಿದರು.
ಸಿದ್ದರಾಮಯ್ಯ ಸರಕಾರ ರಾಜ್ಯಾದ್ಯಂತ ಒಂದು ಸಮುದಾಯವನ್ನು ಓಲೈಸುವತ್ತ ಮಾತ್ರ ಆಡಳಿತ ನಡೆಸಿದೆ. ಜನನ, ಮರಣ ಪ್ರಮಾಣ ಪತ್ರ, ಮುದ್ರಾಂಕ ಶುಲ್ಕ, ಕಸ ಸಂಗ್ರಹ, ನೀರು ಸರಬರಾಜು, ಹಾಲಿನ ಬೆಲೆ ಏರಿಕೆ ಹೀಗೆ ಪ್ರತಿಯೊಂದರಲ್ಲೂ ಲೂಟಿ ಮಾಡಿದ್ದಾರೆ. ಅವರ ಅಭಿವದ್ಧಿ ಧೋರಣೆ ಮುಚ್ಚಿಕೊಳ್ಳಲು ವಿಬಿ ಜಿ ರಾಮ್ ಜಿ ವಿರೋಧಿಸಿ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದುರು.
ರಾಜ್ಯದಲ್ಲಿ ಅಧಿಕಾರಿಗಳಿಗೆ ಯಾವುದೇ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಿಸಿದ್ದು ಅವ್ಯಾಹಿತವಾದ ದಾಳಿ ನಡೆಯುತ್ತಿದೆ. ಹುಬ್ಬಳ್ಳಿಯ ನೇಹ ಕೊಲೆ ಪ್ರಕರಣವನ್ನು ವೈಯಕ್ತಿಕ ವಿಷಯ ಎಂದು ಹೇಳಿಕೆ ನೀಡಿದ್ದಾರೆ. ಶಿಡ್ಲಘಟ್ಟದಲ್ಲಿ ಪೌರಾಯುಕ್ತ ಮೇಲೆ ಆಕ್ರಮಣ ನಡೆಸಿ ನಿಧಿಸಿದರೂ ಆರೋಪಿಯ ಬಂಧನವಾಗಿಲ್ಲ ಇದು ರಾಜ್ಯದ ಕಾನೂನೂ ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಖಂಡಿಸಿದರು.
ಈ ಸಾವಿರದಿನಗಳ ಕಾಂಗ್ರೆಸ್ ಸರಕಾರದಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಶಾಂತಿ, ನೆಮ್ಮದಿ ದೊರೆತಿದೆ. ಸಿದ್ದರಾಮಯ್ಯ ಆ ಸಮುದಾಯವನ್ನು ಓಲೈಸುತ್ತಾರೆ. ಅವರಿಗೆ ಸಾಲಮನ್ನ ಮಾಡಿದ್ದಾರೆ. ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಸಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ, ಪೊಲೀಸರ ಮೇಲೆ ದಾಳಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೇ ನೆಮ್ಮದಿಯಿಂದಿರಲು ಅವಕಾಶ ನೀಡಿದ ಸಿದ್ದರಾಮಯ್ಯ, ಅವರ ಪಕ್ಷದ ಹೆಗಲಿಗೆ ಹೆಗಲು ನೀಡಿದ ಡಿ.ಕೆ.ಶಿವಕುಮಾರ್ ಅವರಿಗೂ ಸುಳ್ಳು ಹೇಳಿ ಸುಳ್ಳಿನ ಸರಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಮುಖಂಡರಾದ ಅಶೋಕ್ ಜಯರಾಂ, ಸಚ್ಚಿದಾನಂದ, ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ನಾಗಾನಂದ, ಪ್ರದೀಪ್ ಇದ್ದರು.




