ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಅಧಿಕಾರದಾಹ ದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ, ಈ ಎರಡು ಪಕ್ಷಗಳ ಅಧಿಕಾರ ಕೇಂದ್ರಿತ ರಾಜಕಾರಣ ಸಂಕಷ್ಟ ತಂದೊಡ್ಡಿದೆ. ಇದುವರೆಗೆ ರಾಜ್ಯವನ್ನಾಳಿದ ಸರ್ಕಾರಗಳು ಕಾವೇರಿ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಿಲ್ಲ ಎಂದು ಆಮ್ ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಬಳಿ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ 28 ಸಂಸದರು ಕೇಂದ್ರದ ಬಳಿ ದನಿ ಎತ್ತದೆ ಸುಮ್ಮನಿದ್ದಾರೆ, ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಗುಲಾಮರಾಗಿದ್ದಾರೆಂದು ಕಿಡಿಕಾರಿದರು.
ಸಂಸದರು ಏನು ಮಾಡುತ್ತಿದ್ದಾರೆ ?
ಮಂಡ್ಯದಲ್ಲಿ ಗೆದ್ದಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅಧಿಕಾರಕ್ಕಾಗಿ ಎಲ್ಲಾ ಪಕ್ಷಗಳ ಜೊತೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿ ಊಸರವಳ್ಳಿ ನಾಟಕ ವಾಡುತ್ತಿದ್ದಾರೆ. ಕಾವೇರಿ ವಿಚಾರವಾಗಿ ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಆದರೆ ಇವರಿಗೆ ಏನಾಗಿದೆ, ಬೀದಿಗಿಳಿದು ಹೋರಾಡಿ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತಬೇಕಾದವರು ಅಧಿಕಾರ ದಾಹಾಕ್ಕಾಗಿ ಸುಮ್ಮನಿದ್ದಾರ ಎಂದು ಪ್ರಶ್ನಿಸಿದರು.
ಸರ್ಕಾರವೇ ಹೋರಾಟ ಮಾಡಬೇಕಾಗಿತ್ತು
ಕಾವೇರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೋರಾಟ ಮಾಡಬೇಕಾಗಿತ್ತು ಆದರೆ ನ್ಯಾಯಾಲಯಕ್ಕೆ ಹೆದರಿ ನೀರು ಬಿಡಬೇಕಾದ ಪರಿಸ್ಥಿತಿ ಇದೆ ಎನ್ನುವ ಸರ್ಕಾರ ರಾಜ್ಯದ ಜನತೆಗೆ ಹೆದರೊಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆಯಲಿಲ್ಲ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಡಿದಂತೆ ಉಳಿಸಿಕೊಳ್ಳಲಿಲ್ಲ ಎಂದು ದೂರಿದರು.
ಒಂದು ದೇಶ ಒಂದು ಚುನಾವಣೆ ಮುಖ್ಯವೇ ?
ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಚುನಾವಣೆ’ ಬಗ್ಗೆ ತಲೆಕೆಡಿಸಿಕೊಂಡಿದೆ, ಅದು ಅಗತ್ಯವಿತ್ತೇ….? ಇಲ್ಲಿ ಕಾವೇರಿಗೆ ರೈತರು ಬೀದಿಯಲ್ಲಿದ್ದಾರೆ. ನಮ್ಮ ಕರ್ನಾಟಕ ದೇಶದೊಳಗೆ ಇಲ್ಲವೇ, ಮುಂದೆ ಅನೇಕ ಚುನಾವಣೆಗಳು ಬರುತ್ತಿರುವುದರಿಂದ ರಾಜಕೀಯ ಪಕ್ಷಗಳ ವರ್ತನೆಯೇ ಬದಲಾಗಿದೆ, ಇಂತಹ ಪಕ್ಷಗಳಿಗೆ ಜನರು ಸರಿಯಾಗಿ ಬುದ್ದಿ ಕಲಿಸಬೇಕಾಗಿದೆ ಎಂದರು.
ನಾಡು ನುಡಿ ಜಲ ವಿಚಾರದಲ್ಲಿ ಅಮ್ ಆದ್ಮಿ ಪಕ್ಷ ಹೋರಾಟಕ್ಕೆ ಮುಂದೆ ನಿಲ್ಲಲಿದೆ, ಕಾವೇರಿ ಹೋರಾಟದಲ್ಲಿ ನಮ್ಮೆಲ್ಲ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಡಾ.ಕೆ.ಅನ್ನದಾನಿ, ಹೋರಾಟಗಾರ್ತಿ ಸುನಂದ ಜಯರಾಂ, ಆಮ್ ಆದ್ಮಿ ಪಕ್ಷ ಮುಖಂಡರಾದ ಬೂದನೂರು ಬೊಮ್ಮಯ್ಯ,ಶಿವಕುಮಾರ್, ರಂಗಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




