Friday, November 20, 2026

ಪ್ರಾಯೋಗಿಕ ಆವೃತ್ತಿ

ಭಾರತದ ಸ್ವಾತಂತ್ರ್ಯ ಹೋರಾಟ ವಿಶ್ವಕ್ಕೆ ಮಾದರಿ

ಬ್ರಿಟಿಷರ ಸರ್ವಾಧಿಕಾರದ ಆಳ್ವಿಕೆಯಿಂದ ಮುಕ್ತಗೊಳಿಸಿ ಭಾರತವನ್ನು ಸ್ವಾತಂತ್ರ್ಯಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ವಿಶ್ವಕ್ಕೆ ಮಾದರಿ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಮಂಡ್ಯ ನಗರದ ಸರ್ .ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಯಾವುದೇ ರಕ್ತಪಾತವಿಲ್ಲದೆ, ಮದ್ದುಗುಂಡುಗಳ ಕಾಳಗವಿಲ್ಲದೆ ಸತ್ಯ, ಅಹಿಂಸೆ, ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರಗಳ ಮೂಲಕ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟವಿದು ಎಂದರು.

ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಜೀ, ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ನೇತಾಜಿ ಸುಭಾಷ್ ಚಂದ್ರಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಭಗತ್ ಸಿಂಗ್ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಸಮಸ್ತರಿಗೂ ಸಾಷ್ಟಾಂಗ ನಮಸ್ಕಾರಗಳು ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್.ಕೆ. ವೀರಣ್ಣಗೌಡ, ಟಿ ಸಿದ್ದಲಿಂಗಯ್ಯ, ಹೆಚ್.ಸಿ ದಾಸಪ್ಪ, ಇಂಡುವಾಳು ಹೊನ್ನಯ್ಯ, ಹೊನಗನಹಳ್ಳಿ ಪುಟ್ಟಣ್ಣ, ಶಿವಪುರ ತಿರುಮಲೇಗೌಡ, ಟಿ.ಎನ್ ಮಾದಪ್ಪಗೌಡ, ಎಂ ಮಹಾಬಲರಾವ್, ವೆಂಕಟಗಿರಿಯಪ್ಪ, ಡಾ:ಪಶುಪತಿರಾವ್, ಮಳವಳ್ಳಿ ವೀರಪ್ಪ, ಎಸ್.ಎಂ. ಮಲ್ಲಯ್ಯ ರವರು ಸೇರಿದಂತೆ ಮುಂತಾದವರು ಭಾಗವಹಿಸಿದ್ದಾರೆ ಎಂದರು.

ಮೈಸೂರು ಸಕ್ಕರೆ ಕಾರ್ಖಾನೆಗೆ ಬಜೆಟ್ ನಲ್ಲಿ ರೂ.50 ಕೋಟಿ ಮಂಜೂರು ಮಾಡಿರುತ್ತದೆ. ಕಾರ್ಖಾನೆಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಈ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು.

ರೈತ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇದುವರೆವಿಗೂ 28,988 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರೂ. 11.96 ಕೋಟಿ ಶಿಷ್ಯವೇತನವನ್ನು ನೀಡಲಾಗಿದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 270572 ಫಲಾನುಭವಿಗಳಿಗೆ ತಲಾ 6000/- ರೂ ಸಹಾಯಧನವನ್ನು ನೀಡಲಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು 244 ಎಕರೆ ಜಮೀನನ್ನು ಕಾಯ್ದಿರಿಸಲಾಗಿರುತ್ತದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿಯಲ್ಲಿ ಮಂಡ್ಯ ಜಿಲ್ಲೆಯ ಒಟ್ಟು 2,92,882 ಕುಟುಂಬಗಳಿಗೆ ಉಚಿತವಾಗಿ ಆರ್.ಟಿ.ಸಿ.,ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿರುತ್ತದೆ ಎಂದರು.

ಜಲ ಜೀವನ್ ಮಿಷನ್ ಹಂತ-1 ರಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ ಒಟ್ಟು 794 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೆಗೆದುಕೊಳ್ಳಲಾಗಿದೆ. ಜಲ ಜೀವನ್ ಮಿಷನ್ ಹಂತ-2ರಲ್ಲಿ ಮದ್ದೂರು, ಮಳವಳ್ಳಿ, ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಒಟ್ಟು 570 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೆಗೆದುಕೊಳ್ಳಲಾಗಿದೆ ಎಂದರು.

77 ಕೋಟಿ ರೂ ವೆಚ್ಚದಲ್ಲಿ ಮದ್ದೂರು ತಾಲ್ಲೂಕು ಕಸಬಾ ಹೋಬಳಿಯಲ್ಲಿ ಏತ ನೀರಾವರಿ ಯೋಜನೆಗಳ ಅಚ್ಚುಕಟ್ಟುಗಳಿಗೆ ಪುನಶ್ಚೇತನ ಮತ್ತು 16 ಕೆರೆಗಳಿಗೆ ಇಗ್ಗಲೂರು ಬ್ಯಾರೇಜ್ ಹಿನ್ನೀರನ್ನು ಬನ್ನಹಳ್ಳಿ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ, ಮದ್ದೂರು ತಾಲ್ಲೂಕು ತಗ್ಗಹಳ್ಳಿ ಅಣೆಕಟ್ಟಿನ ಹಿನ್ನೀರನ್ನು ಏತ ನೀರಾವರಿ ಯೋಜನೆ ಮೂಲಕ ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯಲ್ಲಿ ಬರುವ 17 ಕೆರೆಗಳಿಗೆ ಹಾಗೂ ಕುಣಿಗಲ್ ತಾಲ್ಲೂಕಿನ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯ ಅಂದಾಜು ಮೊತ್ತ ರೂ. 45.00 ಕೋಟಿಗಳಾಗಿದ್ದು, ಕಾಮಗಾರಿಗೆ ಈವರೆಗೆ ರೂ. 15.00 ಕೋಟಿಯಷ್ಟು ವೆಚ್ಚವಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ ಎಂದರು.

2021-22ನೇ ಸಾಲಿಗೆ ಬಸವ ವಸತಿ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಒಟ್ಟು 8700 ಫಲಾನುಭವಿಗಳ ಆಯ್ಕೆ ಗುರಿಯನ್ನು ಜಿಲ್ಲೆಯಲ್ಲಿನ ಗ್ರಾಮ ಪಂಚಾಯಿತಿಗಳಿಗೆ ವರ್ಗವಾರು ನಿಗದಿಪಡಿದಲಾಗಿರುತ್ತದೆ. 2022-23 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ 151 ಎಕರೆ ಸರ್ಕಾರಿ/ಖಾಸಗಿ ಜಮೀನು ನಿವೇಶನ ಹಂಚಲು ಜಿಲ್ಲೆಯಲ್ಲಿ ಲಭ್ಯವಿದ್ದು, ಸದರಿ ಜಮೀನುಗಳಲ್ಲಿ 3020 ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು ಎಂದರು.

ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನಿಸಿಪಾಲಿಟಿ) ಯೋಜನೆ (ಹಂತ-4)ಅನ್ನು ಅನುಷ್ಠಾನಗೊಳಿಸಲು ಜಿಲ್ಲೆಗೆ ರೂ.10,500 ಲಕ್ಷಗಳ ಅನುದಾನವನ್ನು ಮಾಡಲಾಗಿರುತ್ತದೆ. ರಾಜ್ಯ ಸಕಾರವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ “ವಾಜಪೇಯಿ ನಗರ ವಸತಿಯೋಜನೆ, ಡಾ|| ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಗಳಡಿ ಈವರೆವಿಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ 1329 ಮನೆಗಳನ್ನು ನಿರ್ಮಾಣ ಮಾಡಲಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್,ಸಂಸದೆ ಸುಮಲತಾ ಅಂಬರೀಶ್, ನಗರಸಭೆ ಅಧ್ಯಕ್ಷ ಹೆಚ್.ಎಸ್ ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಮುಡಾ ಅಧ್ಯಕ ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜುಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ