ಜೈ ಕರ್ನಾಟಕ ಪರಿಷತ್ತು ಸಂಘಟನೆಯನ್ನು ಬೆಂಬಲಿಸಿ ಹಲವಾರು ಮಂದಿ ಹೊಸ ಸದಸ್ಯರು ಸದಸ್ಯತ್ವ ಪಡೆದುಕೊಂಡು ಸೇರ್ಪಡೆಯಾದರು.
ಮದ್ದೂರು ಪಟ್ಟಣದ ಶ್ರೀ ನರಸಿಂಹ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ನೂತನ ಸದಸ್ಯರನ್ನು ಸ್ವಾಗತಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಸಂಘಟನೆಯನ್ನು ದೊಡ್ಡಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ಜಿಲ್ಲೆ ಎಲ್ಲ ತಾಲ್ಲೂಕು, ಪಟ್ಟಣಗಳಲ್ಲಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಸಂಘಟನೆಯ ತತ್ವ, ಸಿದ್ದಾಂತಗಳನ್ನು ಒಪ್ಪಿ ಬರುವ ಸದಸ್ಯರಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಹೇಳಿದರು.
ಕನ್ನಡ ಭಾಷೆ, ಶಿಕ್ಷಣ, ಪರಿಸರ, ಆರೋಗ್ಯ ಇವುಗಳ ಜೊತೆಯಲ್ಲಿ ಮೂಲಭೂತ ಸೌಕರ್ಯಗಳು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಒಂದು ಸಂಘಟಿತ ವಲಯ ಬೇಕು. ಸಾಮಾನ್ಯ ಜನರಿಗೆ ಸ್ಪಂದಿಸುವ ಸಂಸ್ಥೆ ಎಂದರೆ ಅದು ಜೈ ಕರ್ನಾಟಕ ಪರಿಷತ್ತು. ಸಂಘಟನೆಯು ಸ್ಥಳೀಯರ ನೋವು ನಲಿವುಗಳಿಗೆ ಸದಾ ಸ್ಪಂದನೆ ನೀಡುತ್ತದೆ. ಜೊತೆಗೆ ಒಳ್ಳೆಯ ನಾಯಕ, ನಾಯಕಿಯರನ್ನು ಸೃಷ್ಟಿ ಮಾಡುತ್ತದೆ ಎಂದು ತಿಳಿಸಿದರು.
ಮದ್ದೂರಿನಲ್ಲಿ ಕನ್ನಡ ಅಭಿವೃದ್ಧಿ ಕೆಲಸಗಳು, ಕನ್ನಡ ಗ್ರಂಥಾಲಯಗಳು. ಕನ್ನಡ ಭವನ ನಿರ್ಮಾಣ ಆಗಬೇಕಿದೆ. ಅಂಗಡಿ, ಮುಂಗಟ್ಟುಗಳು, ವಾಣಿಜ್ಯ ಮಳಿಗಗಳ ಕನ್ನಡ ನಾಮಫಲಕಗಳು ಶೇ.೬೦ರಷ್ಟು ಇರುವುದಿಲ್ಲ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು, ಮಳಿಗೆಗಳು ಶೇ.೬೦ರಷ್ಟು ಕನ್ನಡ ನಾಮಫಲಕ ಹಾಕಬೇಕಿದೆ. ಮುಂದಿನ ದಿನಗಳಲ್ಲಿ ಕನ್ನಡ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಕೆಲಸ ಜೈ ಕರ್ನಾಟಕ ಪರಿಷತ್ತು ಮಾಡುತ್ತದೆ ಎಂದು ತಿಳಿಸಿದರು.
ಇನ್ನೂ ಮುಂದೆ ಮದ್ದೂರಿನಲ್ಲಿ ತಿಂಗಳಿಗೆ ಎರಡು ಸಭೆ ನಡೆಸಿ, ನೂತನ ಸದಸ್ಯರ ಜೊತೆ ಸೇರಿ ನಾಡು-ನುಡಿ, ನೆಲ-ಜಲ ರಕ್ಷಣೆ ಸೇರಿದಂತೆ ಸಾಮಾಜಿಕ ಪಿಡುಗುಗಳು, ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಟ ನಡೆಸೋಣ ಎಂದು ಹೇಳಿದರು.
ಶಾಖಾಧ್ಯಕ್ಷರಾದ ಎಂ.ಪುಟ್ಟಸ್ವಾಮಿ, ಕೆ.ಬಿ.ಕೆಂಪೇಗೌಡ, ಬಿ.ಡಿ.ಪುಟ್ಟಸ್ವಾಮಿ, ಕೆ.ಪುಟ್ಟೇಗೌಡ, ಜಿ.ಟಿ.ಕೃಷ್ಣಪ್ಪ ಅವರುಗಳು ತಾವು ಸಂಸ್ಥೆಗೆ ಬಂದು ಹಲವು ರೀತಿಯ ಅನುಭವ ಮತ್ತು ತರಭೇತಿ ಪಡೆದು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ಅನುಭವ ತಿಳಿಸಿದರು.
ಇದೇ ಸಂದರ್ಭದಲ್ಲಿ ವೈರಮುಡಿ, ಜಿ.ಎನ್.ಪುಟ್ಟಲಿಂಗಯ್ಯ, ಜಿ.ಎಂ.ಹೊನ್ನಪ್ಪ, ರುದ್ರಯ್ಯ, ಪಿ.ಕೃಷ್ಷಮೂರ್ತಿ, ನಾಗಣ್ಣ, ಜಿ.ಕುಮಾರ್, ಮಲ್ಲೇಶ್, ನಾರಾಯಣಗೌಡ, ಜಿ.ಎಸ್.ನಿಂಗರಾಜ್, ಜಿ.ಪಿ.ಸಿದ್ದಾಚಾರ್, ಆರ್.ಆನಂದ್, ಲಕ್ಷ್ಮಣಚಾರ್, ಪ್ರಕಾಶ್, ಎಂ.ಸಿ.ಜಯರಾಮ್, ಪ್ರತಾಪ್, ಎಂ.ಪಿ.ನಾಗರಾಜಯ್ಯ, ಕೆ.ಎಂ.ರಾಮಕೃಷ್ಣ, ಹೆಚ್.ಡಿ.ವೆಂಕಟೇಶ್ ಮೂರ್ತಿ, ಪ್ರದೀಪ್, ಚಿಕ್ಕಣ್ಣ ಹಾಗೂ ಶಿವಲಿಂಗೌಡ ನೂತನವಾಗಿ ಸೇರ್ಪಡೆಯಾದರು.




