Tuesday, November 24, 2026

ಪ್ರಾಯೋಗಿಕ ಆವೃತ್ತಿ

ಅಭಿವೃದ್ದಿಯ ಮಂಚೂಣಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ  – ಚಲುವರಾಯಸ್ವಾಮಿ ಮೆಚ್ಚುಗೆ

ಮುಂದಿನ 2 ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ದಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ ಶಾಸಕ ರವಿಕುಮಾರ್ ಗೌಡ ಅವರು ಉತ್ಸಾಹಿ ಶಾಸಕರೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.

ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಶಾಸಕರು ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಜೊತೆಗೆ ಮದುವೆ, ಮುಂಜಿ, ಬೀಗರೂಟ, ಜಾತ್ರೆ, ದೇವಾಲಯಗಳ ಭೇಟಿ, ಸಾವು-ನೋವುಗಳಿಗೆ ಸ್ಪಂದಿಸುವ ಜೊತೆಗೆ ಕ್ಷೇತ್ರದ ಅಭಿವೃದ್ದಿಗೆ ಸೂಕ್ತ ಅನುದಾನ ತರುವ ಕೌಶಲ್ಯ ಬೆಳೆಸಿಕೊಂಡಿದ್ದಾರೆಂದು ಗುಣಗಾನ ಮಾಡಿದರು.

ಮುಂದಿನ 2 ವರ್ಷಗಳಲ್ಲಿ ಜಿಲ್ಲಾ ಕೇಂದ್ರದ ವೃತ್ತಗಳ ಸೌಂದರ್ಯಿಕರಣ, ಉತ್ತಮ ರಸ್ತೆಗಳ ನಿರ್ಮಾಣ ಹಾಗೂ ಅಗತ್ಯ ಸೌಲಭ್ಯಗಳ ಅಳವಡಿಕೆಯಿಂದ ಜಿಲ್ಲಾ ಕೇಂದ್ರಕ್ಕೆ ಇತರೆ ತಾಲ್ಲೂಕುಗಳ ಲಕ್ಷಾಂತರ ಜನತೆ ಬಂದು ಹೋಗುವ ವಾತಾವರಣ ಸೃಷ್ಠಿಯಾಗಲಿದೆ ಎಂದರು.

ಜಿಲ್ಲಾ ಕೇಂದ್ರದ ನಿರೀಕ್ಷಿತ ಅಭಿವೃದ್ದಿಗೆ ನನ್ನೊಡನೆ ಸ್ಪಂದಿಸುವ ಶಾಸಕರು ಚುನಾಯಿತರಾಗಬೇಕೆಂಬ ನನ್ನ ಕನಸು ಸಾಕಾರಗೊಂಡಿದೆ. ಜಿಲ್ಲೆಯ 6 ಶಾಸಕರು ಸೇರಿ ರಾಜ್ಯದ 139 ಶಾಸಕರ ಬಲವುಳ್ಳ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅಭಿವೃದ್ದಿಗೆ ಗಮನಹರಿಸುವ ಇರಾದೆ ನಮ್ಮ ಸರ್ಕಾರಕ್ಕಿದೆ ಎಂದರು.

ಮಧ್ಯಪ್ರದೇಶ ಸರ್ಕಾರದಲ್ಲಿ 17 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಹಾಲಿ ಕೇಂದ್ರದ ಕೃಷಿ ಸಚಿವರು ನಮ್ಮ ಸರ್ಕಾರದ ಕೃಷಿ ಇಲಾಖೆಯ ಸಾಧನೆಯನ್ನು ಮೆಚ್ಚಿದ್ದಾರೆ. ಇವರ ಹೊಗಳಿಕೆಗಿಂತ ಆರ್.ಅಶೋಕ್, ಸಿ.ಟಿ.ರವಿ ಅಥವಾ ಜೆಡಿಎಸ್ ನವರ ಪ್ರಶಂಸೆ ನಮಗೆ ಬೇಕೇ ? ಎಂದು ವ್ಯಂಗ್ಯವಾಡಿದರು.

ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಗೆ 4.48 ಲಕ್ಷ ಕೋಟಿ ರೂ.ಗಳ 17 ನೇ ಆಯ-ವ್ಯಯ ಮಂಡಿಸಿರುವ ಸಿದ್ದರಾಮಯ್ಯನವರ ಸರ್ಕಾರವನ್ನು ಸದಾ ಟೀಕಿಸುವುದೇ ಉದ್ಯೋಗವಾಗಿದ್ದು, 139 ಶಾಸಕರ ಬಲವುಳ್ಳ, ರಾಜ್ಯದ 7 ಕೋಟಿ ಜನರ ಆಶೀರ್ವಾದದಿಂದ ರಚಿತವಾಗಿರುವ ಸರ್ಕಾರವನ್ನು ಕಿತ್ತೆಸೆಯುವ ಹೇಳಿಕೆ ಹಾಸ್ಯಾಸ್ಪದವಲ್ಲವೇ ಎಂದು ಹೀಯಾಳಿಸಿದರು. ವಿಪಕ್ಷ ನಾಯಕರು ಮುಖ್ಯಮಂತ್ರಿಗಳ ಉತ್ತಮ ಕೆಲಸಗಳನ್ನು ಹೊಗಳಲು ಸಾಧ್ಯವೇ ? ಅಥವಾ ನಾವಾದರೂ ಅವರಿಂದ ಹೊಗಳಿಕೆ ನಿರೀಕ್ಷಿಸುವುದು ಸಾಧ್ಯವೇ ? ಎಂದು ವ್ಯಂಗ್ಯವಾಡಿದರು.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರೈತರಿಗೆ ಆರ್ಥಿಕ ಶಕ್ತಿ ತುಂಬುದ ಸದುದ್ದೇಶದಿಂದ ರೈತರು ಉತ್ಪಾದಿಸುವ ಬೆಳೆಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಇರಾದೆಯೊಂದಿಗೆ ರಫ್ತು ವಹಿವಾಟು ಹೆಚ್ಚಿಸಲು 100 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಮಂಡ್ಯ ಜಿಲ್ಲೆಯ ರೈತರಿಗೂ ವರದಾನವಾಗಲಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿಯಿಂದ ಸ್ಥಾಪನೆಯಾಗಿದ್ದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿ.ವಿ. ತೆರೆದಿರುವ ಸರ್ಕಾರದ ನಿರ್ಧಾರವನ್ನು ಉರಿಲಿಂಗಿ ಪೆದ್ದಿ ಮಠದ ಪೀಠಾಧಿಪತಿ ಜ್ಞಾನ ಪ್ರಕಾಶ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ.ಕೆ.ವಿ.ಕೆಯಿಂದ ವಿಸರ್ಜಿಸಿ ಹೊಸ ವಿ.ವಿ.ತೆರೆಯುವ ಕೆಲಸ ಸುಲಭವಲ್ಲ ಎಂಬುವುದು ನನಗೂ ಗೊತ್ತಿತ್ತು. ನಮ್ಮ ಶಾಸಕರ ಸಹಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಅಭಿಮಾನದಿಂದ ವಿ.ವಿ.ಕಾರ್ಯಾರಂಭವಾಗಿದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ