Saturday, May 18, 2024

ಪ್ರಾಯೋಗಿಕ ಆವೃತ್ತಿ

ಆತ್ಮವಂಚಕ ಮುಖವಾಡವನ್ನು ಹೊಂದಿರುವ ನಟರಿಗಿಂತ ಎಷ್ಟೋ ಪಾಲು ಉತ್ತಮ-ಯುವಕರ ಆಶಾಕಿರಣ : ಚೇತನ್ ಅಹಿಂಸಾ

✍️ ವಿವೇಕಾನಂದ ಎಚ್ ಕೆ.

ಚೇತನ್ ಅಹಿಂಸಾ ಎಂಬ ಸಿನಿಮಾ ನಟ ಮತ್ತು ಪ್ರಗತಿಪರ ಚಿಂತಕರಲ್ಲಿ ಚೇತನವೇನೋ ಇದೆ ಆದರೆ ಸ್ವಲ್ಪ ಹಿಂಸೆಯೂ ಸೇರಿರುವುದು ಮಾತ್ರ ಬೇಸರದ ಸಂಗತಿ.

ಸಮಾಜದ ಯಾವುದೇ ಸಮಕಾಲೀನ ವಿಷಯಗಳ ಬಗ್ಗೆ ಮುಕ್ತವಾಗಿ ಮತ್ತು ಧೈರ್ಯವಾಗಿ ತಮ್ಮ ಪ್ರತಿಕ್ರಿಯೆ ನೀಡುವ ಅತ್ಯಂತ ವೈಚಾರಿಕ ಪ್ರಜ್ಞೆಯ ಇವರು ಇತರ ಅನೇಕ ಆತ್ಮವಂಚಕ ಮುಖವಾಡವನ್ನು ಹೊಂದಿರುವ ನಟರಿಗಿಂತ ಎಷ್ಟೋ ಪಾಲು ಉತ್ತಮ ಮತ್ತು ಯುವಕರ ಆಶಾಕಿರಣ. ಆದರೆ ಸ್ವಲ್ಪ ಎಡವುತ್ತಿದ್ದಾರೆ ಎನಿಸುತ್ತದೆ. ಅವರ ಬದುಕು, ಅವರ ನಿಲುವುಗಳನ್ನು ರೂಪಿಸಿಕೊಳ್ಳುವ ಅವರ ಸ್ವಾತಂತ್ರ್ಯ ಅವರಿಗಿದೆ. ಅದನ್ನು ಗೌರವಿಸುತ್ತಾ ನಮ್ಮ ವಿಮರ್ಶೆಯ ಸ್ವಾತಂತ್ರ್ಯವನ್ನು ಉಪಯೋಗಿಸುತ್ತಾ……

ಮೂಲತಃ ಬುದ್ಧ ಬಸವ ಅಂಬೇಡ್ಕರ್ ಮತ್ತು ಪೆರಿಯಾರ್ ತತ್ವಗಳಲ್ಲಿ ಅಚಲವಾದ ನಂಬಿಕೆಯಿರುವುದು ಅವರ ಸಾಮಾಜಿಕ ಜಾಲತಾಣಗಳ ಬರಹ ಮತ್ತು ಅಭಿಪ್ರಾಯಗಳನ್ನು ಗಮನಿಸಿದಾಗ ತಿಳಿಯುತ್ತದೆ. ಅದರ ಜೊತೆಗೆ ಗಾಂಧಿಯವರ ಬಗ್ಗೆ ಅಸಹನೆಯನ್ನು ಹೊಂದಿದ್ದಾರೆ. ಮುಖ್ಯವಾಗಿ ಗಾಂಧಿಯನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತಾರೆ. ಬಹುಶಃ ಅಲ್ಲಿಯೇ ಚೇತನ್ ಅಹಿಂಸ ಹಿಂಸಾವಾದಿಯಾಗುವುದು.

ವಿರೋಧಿಸುವ ಮತ್ತು ದ್ವೇಷಿಸುವ ನಿಲುವುಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ. ವಿರೋಧ ತಾತ್ವಿಕ ನೆಲೆಯ ಅಹಿಂಸೆಯಾದರೆ, ದ್ವೇಷ ಹಿಂಸೆಯಾಗಿ ಮಾರ್ಪಡುತ್ತದೆ. ಆಗ ಹಿಂಸೆ ಸಮನ್ವಯಕ್ಕಿಂತ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಸಮಸ್ಯೆಗಳ ಪರಿಹಾರಕ್ಕಿಂತ ಅದನ್ನು ಆಳಕ್ಕೆ ವಿಸ್ತರಿಸುತ್ತದೆ…

ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಮುಸ್ಲಿಮರ ಬಗ್ಗೆ ಆರೆಸ್ಸೆಸ್ ನಿಲುವು ಆಳದಲ್ಲಿ ವಿರೋಧಕ್ಕಿಂತ ಹೆಚ್ಚಾಗಿ ದ್ವೇಷವನ್ನು ಹೊಂದಿದೆ. ಬಂಡವಾಳ ಶಾಹಿಗಳ ಬಗ್ಗೆ ಕಮ್ಯುನಿಸ್ಟ್ ನಿಲುವು ಸಹ ವಿರೋಧಕ್ಕಿಂತ ಹೆಚ್ಚು ದ್ವೇಷದ ಭಾವ ಹೊಂದಿದೆ. ಪೆರಿಯಾರ್ ಅವರಲ್ಲಿ ಬ್ರಾಹ್ಮಣ ಮತ್ತು ದೇವರ ಬಗ್ಗೆ ವಿರೋಧಕ್ಕಿಂತ ದ್ವೇಷವೇ ಮೇಲುಗೈ ಪಡೆಯುತ್ತದೆ. ಬಹುತೇಕ ಇಸ್ಲಾಂ ಅನುಯಾಯಿಗಳು ಸಹ ಇತರ ಧರ್ಮಗಳನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತಾರೆ. ಗಾಂಧಿಯವರ ವಿಷಯದಲ್ಲಿ ಸಹ ಮೂಲಭೂತವಾದಿ ಸನಾತನಿಗಳು ವಿರೋಧಕ್ಕಿಂತ ದ್ವೇಷವನ್ನೇ ಹೊಂದಿದ್ದಾರೆ.

ಚೇತನ್ ಅಹಿಂಸಾ ದಾರಿ ತಪ್ಪುವುದು ಇಲ್ಲಿಯೇ. ಅವರು ಸದಾ ಉದಾಹರಿಸುವ ಬಸವಣ್ಣನವರು ದಲಿತರಿಗೂ ಬ್ರಾಹ್ಮಣರಿಗೂ ಮದುವೆ ಮಾಡಿಸುತ್ತಾರೆ. ಸಮಾನತೆಯನ್ನು ಸಾರುತ್ತಾರೆ ಮತ್ತು ಅಸಮಾನತೆಯನ್ನು ವಿರೋಧಿಸುತ್ತಾರೆಯೇ ಹೊರತು ಬ್ರಾಹ್ಮಣರನ್ನು ದ್ವೇಷಿಸುವುದಿಲ್ಲ. ಬಾಬಾ ಸಾಹೇಬ್ ಜಾತಿ ವ್ಯವಸ್ಥೆಯನ್ನು, ಮನುಸ್ಮೃತಿಗಳನ್ನು ಖಂಡುತುಂಡವಾಗಿ ವಿರೋಧಿಸುತ್ತಾರೆ ಆದರೆ ಬ್ರಾಹ್ಮಣ ಸಮುದಾಯವನ್ನು ದ್ವೇಷಿಸುವುದಿಲ್ಲ. ಅದನ್ನು ಸಂವಿಧಾನದ ಕರಡು ರಚನೆಯಲ್ಲಿ ಸಹ ಕಾಣಬಹುದು. ಮಹಾತ್ಮ ಗಾಂಧಿಯವರು ಬ್ರಿಟೀಷರನ್ನು ವಿರೋಧಿಸುತ್ತಾರೆ ಆದರೆ ನಾಶವಾಗಲಿ ಎಂದು ದ್ವೇಷಿಸುವುದಿಲ್ಲ. ಬುದ್ದ ಎಂದೆಂದಿಗೂ ಹಿಂಸೆಯ ಹತ್ತಿರಕ್ಕೂ ಸುಳಿಯುವುದಿಲ್ಲ.

ಆದರೆ ಚೇತನ್ ಅಹಿಂಸಾ ಅವರ ಪ್ರತಿಕ್ರಿಯೆಗಳು ಸ್ವಲ್ಪ ಪ್ರಚೋದನಾಕಾರಿ ಮತ್ತು ಪ್ರಚಾರ ಪ್ರಿಯತೆಯನ್ನು ಹೊಂದಿವೆ. ಅವರು ಹೇಳಬೇಕಾಗಿರುವುದನ್ನು ಇನ್ನಷ್ಟು ಪ್ರೀತಿ ಬೆರೆಸಿ ಹೇಳಿದರೆ ಸಾರ್ವಜನಿಕ ಬದುಕು ಮತ್ತಷ್ಟು ಸಹನೀಯವಾಗಬಹುದು. ದಿಢೀರ್ ಜನಪ್ರಿಯತೆ ಲಭಿಸದಿದ್ದರು ವ್ಯಕ್ತಿತ್ವದ ತೂಕ ಹೆಚ್ಚಾಗಿ ಶತ್ರುಗಳ ಸಂಖ್ಯೆ ಕಡಿಮೆಯಾಗಬಹುದು.

ಸಾಮಾಜಿಕ ಜವಾಬ್ದಾರಿಯ ಯುವಕನೊಬ್ಬ ಮುಖ್ಯವಾಹಿನಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದೇ ಒಂದು ದೊಡ್ಡ ಸಾಧನೆ. ವಿಷ ಕಾರುವ ಅನೇಕ ಭಾಷಣಕಾರರು, ಅಂಕಣಕಾರರು, ಪತ್ರಕರ್ತರು, ಯೂಟ್ಯೂಬ್‌ರ್ ಗಳ ನಡುವೆ ಬುದ್ದ ಬಸವ ಬಾಬಾ ಸಾಹೇಬರ ವಿಚಾರಗಳ ಮಾನವೀಯ ಮೌಲ್ಯಗಳ ಪ್ರತಿಪಾದಕರಾದ ಚೇತನ್ ಅಹಿಂಸರವರು ಮತ್ತಷ್ಟು ಬೆಳೆದರೆ ಅದು ಉತ್ತಮ ಸಮಾಜಕ್ಕೆ ಒಂದು ಕೊಡುಗೆಯಾಗುತ್ತದೆ ಎಂದು ಆಶಿಸುತ್ತಾ……

ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ವರ್ಗದೊಂದಿಗೆ ಹೆಚ್ಚು ತಾಳ್ಮೆ ಮತ್ತು ಪ್ರಬುದ್ದತೆಯಿಂದ ಸಂವಹನ ನಡೆಸಲು ಸಾಧ್ಯವಾದರೆ ಬಹುಶಃ ಶೇಕಡಾ 75% ಕ್ಕೂ ಹೆಚ್ಚು ಜನರು ನಿಧಾನವಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇರುತ್ತದೆ ಮತ್ತು ಕನಿಷ್ಠ ತಟಸ್ಥ ಮನಸ್ಥಿತಿಗೆ ಬಂದು ತಲುಪಿ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಕಡಿಮೆಯಾಗಿ ಸ್ವಾಸ್ಥ್ಯ ಉತ್ತಮವಾಗುತ್ತದೆ. ಇಲ್ಲದಿದ್ದರೆ ಸೈದ್ದಾಂತಿಕ ಅತಿರೇಕಗಳಿಂದ ವ್ಯಕ್ತಿ ಮತ್ತು ಸಮಾಜ ಸದಾ ಅತೃಪ್ತಿ ಅಸಹನೆಯ ಕುಲುಮೆಯಲ್ಲಿ ಸುಡುತ್ತಲೇ ಇರುತ್ತದೆ. ಶಾಂತಿ, ಅಭಿವೃದ್ಧಿ ಮತ್ತು ಸಾಧನೆ ‌ಸಾಧ್ಯವಾಗುವುದಿಲ್ಲ. ಎಲ್ಲರೂ ದಯವಿಟ್ಟು ಈ ನಿಟ್ಟಿನಲ್ಲಿ ಮತ್ತೊಮ್ಮೆ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!