ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ಗೆ 60 ರೂ. ಏರಿಕೆ ಮಾಡಿದ್ದನ್ನು ಖಂಡಿಸಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯ ಕರ್ತೆಯರು ಮಂಡ್ಯ ನಗರದ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ತೊಲಗಲಿ ತೊಲಗಲಿ ಕೇಂದ್ರ ಬಿಜೆಪಿ ಸರ್ಕಾರ ತೊಲಗಲಿ” ಎಂದು ಘೋಷಣೆ ಗಳನ್ನು ಕೂಗಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಾತನಾಡಿ,ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಬೆಲೆಗಳನ್ನು ಏರಿಸಿ ಬಡ ಜನತೆಗೆ ಅತ್ಯಂತ ಕಷ್ಟ ಕಾಲದ ಆರ್ಥಿಕ ದುಃಸ್ಥಿತಿಗೆ ತಳ್ಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ₹ 400 ರೂಪಾಯಿ ಇದ್ದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ₹ 1100 ಏರಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದನ್ನು ಪ್ರತಿಭಟಿಸಿ ಕಾಂಗ್ರೆಸ್ ದೇಶದ ಉದ್ದಗಲಕ್ಕೂ ಬೀದಿಗಿಳಿದು ಪ್ರತಿಭಟಿಸಿದರ ಪರಿಣಾಮ ಸಿಲಿಂಡರ್ ಬೆಲೆಯಲ್ಲಿ ₹ 200 ಕಡಿಮೆ ಮಾಡುವ ನಾಟಕವಾಡಿತ್ತು.ಆದರೆ, ಈಗ ಮತ್ತೆ ವಿನಾಕಾರಣ ಪ್ರತಿ ಸಿಲೆಂಡರ್ ಬೆಲೆಯಲ್ಲಿ ಒಮ್ಮೆಲೇ ₹60 ಹೆಚ್ಚಿಸಿ ಬಡಜನತೆಯ ಮೇಲೆ ಅನ್ಯಾಯದ ಆರ್ಥಿಕ ಹೊರೆಯನ್ನು ಹೇರಿದೆ.ಕೂಡಲೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಚ್.ಬಿ. ಶುಭದಾಯಿನಿ ಮಾತನಾಡಿ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾದರೆ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ಮಾಡುವುದು ಹೇಗೆ? ತಕ್ಷಣವೇ ಈ ಬೆಲೆ ಏರಿಕೆ ಯನ್ನು ವಾಪಸ್ ಪಡೆಯ ಬೇಕು.ಇಲ್ಲದಿದ್ದರೆ ರಾಜ್ಯದ ಮಹಿಳೆಯರು ಮತ್ತು ಜನತೆ ಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ ಕೇಂದ್ರ ಸರ್ಕಾರವು ದಿನೇ ದಿನೇ ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಬಡವರು ಅಡುಗೆ ಮಾಡ ದಂತಹ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಅಚ್ಛೇ ದಿನ್ ತರುತ್ತೇವೆ ಎಂದವರು ಇಂದು ಪ್ರತಿಯೊಬ್ಬರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್,ಕಾಂಗ್ರೆಸ್ ಮುಖಂಡರಾದ ಚಂದಗಾಲು ವಿಜಯ್ ಕುಮಾರ್ , ಸುಂಡಹಳ್ಳಿ ಮಂಜುನಾಥ,ಅಜ್ಜಹಳ್ಳಿ ರಾಮಕೃಷ್ಣ, ಚನ್ನಪ್ಪ, ಚಿನಕುರಳಿ ರಮೇಶ್, ಎಲ್.ಕೃಷ್ಣ, ಹನ್ಸಿಯಬಾನ್, ಕೃಷ್ಣೆಗೌಡ,ಅಭಿಲಾಷ್, ನಾಗಮಣಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮಹಿಳಾ ಘಟಕದ ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದರು




