ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಯ ಸೀಟು ಹಂಚಿಕೆಯ ಬಳಿಕ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕೊಯಮತ್ತೂರಿನಲ್ಲಿ ಪಕ್ಷಕ್ಕೆ ಕೇವಲ ಒಂದು ಕ್ಷೇತ್ರ ಮಾತ್ರ ಹಂಚಿಕೆಯಾಗಿರುವ ಕಾರಣಕ್ಕೆ ಪಕ್ಷ ಅಣ್ಣಾಮಲೈ ಅವರಿಗೆ ಟಿಕೆಟ್ ನೀಡುವ ಆಸಕ್ತಿ ತೋರುತ್ತಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ಇನ್ನು, ಬಿಜೆಪಿಗೆ ಹಂಚಿಕೆಯಾಗಿರುವ ಎರಡು ಕ್ಷೇತ್ರಗಳಾದ ತಂಜಾವೂರು ಮತ್ತು ಗಂಧರ್ವಕೊಟ್ಟೈ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟು, ಬದಲಿ ಕ್ಷೇತ್ರಗಳನ್ನು ಪಡೆಯುವುದರ ಬಗ್ಗೆ ಎನ್ಡಿಎ ಮೈತ್ರಿಯಲ್ಲಿ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳೂ ಇವೆ.
ಗಂಧರ್ವಕೊಟ್ಟೈ ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ ಕ್ಷೇತ್ರವಾಗಿದ್ದು, ಡಿಎಂಕೆ ನೇತೃತ್ವದ ಒಕ್ಕೂಟದ ಪಕ್ಷವಾಗಿರುವ ಸಿಪಿಎಂ 2021ರ ಚುನಾವಣೆಯಲ್ಲಿ ಗೆದ್ದಿತ್ತು. ಈಗ ಗಂಧರ್ವಕೊಟ್ಟೈನಲ್ಲಿ ಪರಿಚಿತ ಮುಖವನ್ನು ಕಣಕ್ಕಿಳಿಸುವ ಸವಾಲನ್ನು ಬಿಜೆಪಿ ಎದುರಿಸುತ್ತಿದೆ. ತಂಜಾವೂರನ್ನು ತನ್ನಲ್ಲೇ ಉಳಿಸಿಕೊಳ್ಳುವದಕ್ಕೆ ಎಐಎಡಿಎಂಕೆ ಆಸಕ್ತಿ ತೋರಿದ್ದು, ಹಾಗಾಗಿ ಕ್ಷೇತ್ರಗಳ ಬದಲಾವಣೆಯ ಬಗ್ಗೆ ಉಭಯ ಪಕ್ಷಗಳು ಮಾತುಕತೆಗೆ ಚಿಂತಿಸಿವೆ.
ಬಿಜೆಪಿಗೆ ಹಂಚಿಕೆಯಾಗಿರುವ 27 ಕ್ಷೇತ್ರಗಳ ಪೈಕಿ, ಕೊಯಮತ್ತೂರು ಉತ್ತರ ಮಾತ್ರ ಕೊಯಮತ್ತೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಅಣ್ಣಾಮಲೈ ಸಿಂಗನಲ್ಲೂರು ಅಥವಾ ಕಾವುಂಡಂಪಾಳಯಂನಿಂದ ಸ್ಪರ್ಧಿಸಲು ಆದ್ಯತೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಅಣ್ಣಾಮಲೈ ಸ್ಪರ್ಧಿಸಲು ಬಯಸಿದ್ದ ಎರಡೂ ಕ್ಷೇತ್ರಗಳು ಬಿಜೆಪಿ ಪಾಲಿಗೆ ಹಂಚಿಕೆ ಮಾಡಲಾಗಿಲ್ಲ. ಹಾಗಾಗಿ, ಅಣ್ಣಾಮಲೈ ಸ್ಪರ್ಧೆಯಿಂದ ಹೊರಕ್ಕುಳಿಯದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅಧ್ಯಕ್ಷತೆಯಲ್ಲಿ ಮಾ.26ರಂದು ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಣ್ಣಾಮಲೈ ಅವರ ಅನುಪಸ್ಥಿತಿ ಎದ್ದು ಕಂಡಿತ್ತು.
ಇನ್ನು, ಮೈಲಾಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿರುವ ಹಿರಿಯ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಮತ್ತು ಈ ಬಾರಿ ಕೊಯಮತ್ತೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿರುವ ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್ ಸಭೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಒಂದೆರಡು ದಿನಗಳಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಅಣ್ಣಾಮಲೈ 2021 ರ ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಆದರೆ ಎರಡೂ ಚುನಾವಣೆಗಳಲ್ಲಿ ಸೋತಿದ್ದರು.
ಇನ್ನು, ಫೆಬ್ರವರಿಯಲ್ಲಿ, ಪಕ್ಷ ಅಣ್ಣಾಮಲೈ ಅವರನ್ನು ಚುನಾವಣಾ ಪ್ರಚಾರ ಸಮಿತಿಯ ವ್ಯವಸ್ಥಾಪಕರನ್ನಾಗಿ ನೇಮಿಸಿದಾಗ, ಅಣ್ಣಾಮಲೈ ತಮ್ಮ ತಂದೆಯ ಆರೋಗ್ಯದ ಕಾರಣ ಹೇಳಿ ಜವಾಬ್ದಾರಿಯನ್ನು ತ್ಯಜಿಸಿದ್ದರು. ಪಕ್ಷದ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿದ್ದಕ್ಕೆ, ಪಕ್ಷದ ಹೈಕಮಾಂಡ್ ಮೇಲೆ ಅಸಮಾಧಾನ ಹೊಂದಿರುವ ಕಾರಣಕ್ಕೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅಣ್ಣಾಮಲೈ ನಿರಾಕರಿಸಿದ್ದರು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು.
ಸದ್ಯ, ಮತ್ತೊಮ್ಮೆ ತಮಿಳುನಾಡಿನಲ್ಲಿ ಬಿಜೆಪಿ ʼಬಳಸಿ ಬಿಸಾಡುವʼ ತನ್ನ ಹಳೆಯ ರಾಜಕೀಯ ನೀತಿಯನ್ನು ಅಣ್ಣಾಮಲೈ ಅವರಿಗೆ ಮಾಡಿ ತೋರಿಸಿದೆ. ಪಕ್ಷ ಅವರಿಗೆ ವಂಚಿಸಿದೆ ಎಂದು ಎನ್ಡಿಎಯೇತರ ಪಕ್ಷಗಳು ಟೀಕಿಸುತ್ತಿವೆ.




