ಮಂಡ್ಯ ಹಾಲು ಒಕ್ಕೂಟದಲ್ಲಿ ನಿರ್ಮಿಸಲಾಗಿರುವ ಮೆಗಾಡೈರಿ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿದ್ದು,ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದೆಂದು ರೈತಸಂಘದ ಮುಖಂಡ ಎಚ್.ಸಿ.ಮಧುಚಂದನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಪ್ರಸ್ತುತ ಮನ್ಮುಲ್ನಲ್ಲಿ 285 ಖಾಯಂ ನೌಕರರು ಹಾಗೂ 1300 ಹೊರ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.
ಆದರೂ 510 ಹುದ್ದೆಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸಹಕಾರ ಇಲಾಖೆಯ ಉಪನಿಬಂಧಕರಿಂದ ಮಂಜೂರಾತಿ ಪಡೆದುಕೊಂಡಿದ್ದಾರೆ. ಮೆಗಾ ಡೈರಿ ನಿರ್ಮಾಣವಾಗಿರುವಾಗ ಇಷ್ಟೊಂದು ಹುದ್ದೆಯ ಅಗತ್ಯವಿಲ್ಲದಿದ್ದರೂ ಹಣ ಮಾಡುವ ಏಕೈಕ ಉದ್ದೇಶದಿಂದ ಹೆಚ್ಚುವರಿ ಹುದ್ದೆಗಳನ್ನು ಸೃಷ್ಠಿಸಿ ಆರ್ಥಿಕ ಹೊರೆಯನ್ನುಂಟುಮಾಡಿದ್ದಾರೆ ಎಂದು ಆರೋಪಿಸಿದರು.
ನೇಮಕಾತಿ ದಂಧೆ
ಅಗತ್ಯವಿಲ್ಲದಿದ್ದರೂ 187 ಹುದ್ದೆಗಳಿಗೆ ಮತ್ತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವ ಮೂಲಕ ಹಣ ಮಾಡುವ ದಂಧೆಗೆ ಇಳಿದಿದ್ದಾರೆ.ಒಂದೊಂದು ನೇಮಕಾತಿಯಲ್ಲೂ ಲಕ್ಷಾಂತರ ಹಣ ವಸೂಲಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸೆ.4ರಂದು ನೇಮಕಾತಿ ಪರೀಕ್ಷೆ ನಡೆಸಲು ಒಕ್ಕೂಟ ಸಿದ್ಧತೆ ನಡೆಸಿದ್ದು, ಈ ನೇಮಕಾತಿಗೆ ತಡೆಯಾಜ್ಞೆ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಮೆಗಾ ಡೈರಿಗೆ 4 ಸಾವಿರ ಕೆ.ವಿ. ಸಾಮರ್ಥ್ಯದ ವಿದ್ಯುತ್ ಅವಶ್ಯಕತೆ ಇದ್ದು, ಆಡಳಿತ ಮಂಡಳಿಯವರು ವಿದ್ಯುತ್ ಇಲಾಖೆಯಿಂದ ಸಂಪರ್ಕವನ್ನು ಪಡೆದುಕೊಳ್ಳದೆ 2500 ಕೆ.ವಿ. ಸಾಮರ್ಥ್ಯದ ಡೀಸೆಲ್ ಜನರೇಟರನ್ನು ಖರೀದಿ ಮಾಡಿದ್ದಾರೆ. ಇದರಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು ಒಂದು ಕೋಟಿಗೂ ಅಧಿಕ ನಷ್ಟವಾಗುತ್ತಿದೆ ಎಂದು ದೂರಿದರು.
ದೊಡ್ಡ ಹಗರಣ
ಮನ್ಮುಲ್ನಲ್ಲಿ ನಡೆದಿರುವ ಹಗರಣ ಪಿಎಸ್ಐ ಹಗರಣಕ್ಕಿಂತಲೂ ದೊಡ್ಡದಿದೆ.ಕೇವಲ ಹಣ ಮಾಡುವ ಒಂದೇ ಉದ್ದೇಶದಿಂದ ಸದಸ್ಯರು ನಿಂತಿದ್ದಾರೆ.ಅವರಿಗೆ ಒಕ್ಕೂಟದ ಮೇಲೆ ಕಾಳಜಿಯಿಲ್ಲ.
ಒಂದೆಡೆ ನೀರು ಮಿಶ್ರಿತ ಹಾಲು ಹಗರಣ ಸಿಐಡಿ ತನಿಖೆಯಲ್ಲಿದೆ. ಕಳೆದ ಆಡಳಿತ ಮಂಡಳಿ 72 ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪಕ್ಕೆ ಗುರಿಯಾಗಿದೆ. ಮೆಗಾ ಡೈರಿ ಸ್ಥಾಪನೆ ಅವ್ಯವಹಾರದ ತನಿಖೆ ಇನ್ನೂ ನಡೆದಿಲ್ಲ. ಈ ಎಲ್ಲಾ ಗೊಂದಲಗಳ ನಡುವೆಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಈ ನೇಮಕಾತಿಯಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಅಭ್ಯರ್ಥಿಗಳು ಈಗಲೇ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳಲು ಆಸೆ ಪಟ್ಟರೆ ಮುಂದೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದ್ದಲ್ಲಿ ಇತ್ತ ಕೆಲಸವೂ ಇಲ್ಲ, ಅತ್ತ ಹಣವೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಮುಖಂಡರಾದ ಪಿ.ಡಿ. ರಮೇಶ್, ವಿಜಯಕುಮಾರ್, ಹಾಲಹಳ್ಳಿ ಮಹೇಶ್, ಲಿಂಗಪ್ಪಾಜಿ ಗೋಷ್ಠಿಯಲ್ಲಿದ್ದರು.




