Monday, November 23, 2026

ಪ್ರಾಯೋಗಿಕ ಆವೃತ್ತಿ

ರೈತರಿಗೆ ಮಾರಕವಾಗಲಿದೆ ಕುಲಾಂತರಿ ಭತ್ತ

ಈ ದೇಶದಲ್ಲಿ ‘ತಂತ್ರಜ್ಞಾನ’ ಮತ್ತು ‘ಸ್ವದೇಶಿ ಸಂಶೋದನೆ’ ಎಂಬ ಆಕರ್ಷಕ ಶಬ್ದಗಳ ಹಿಂದೆ ಎಂತೆಂತಹ ಮಹಾ ವಂಚನೆಗಳು ಅಡಗಿರುತ್ತವೆ ಎಂಬುದನ್ನು ತಿಳಿಯಬೇಕಾದರೆ ನಾವಿಂದು ಕೃಷಿ ಕ್ಷೇತ್ರದತ್ತ ಕಣ್ಣು ಹಾಯಿಸಬೇಕಾಗಿದೆ. ನಮ್ಮ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಈಗಾಗಲೇ ಖಾಸಗಿ ಬಂಡವಾಳಶಾಹಿಗಳ ಕೈಗೆ ಒಪ್ಪಿಸಲಾಗಿದೆ. ಪರಿಣಾಮವಾಗಿ, ದಿನಬೆಳಗಾದರೆ ಶಾಲೆ-ಕಾಲೇಜುಗಳ ಫೀಸು ಕಟ್ಟಲಾರದೆ, ಆಸ್ಪತ್ರೆಗಳ ಭಾರಿ ಬಿಲ್ ತೀರಿಸಲಾಗದೆ ಶ್ರೀಸಾಮಾನ್ಯರು ಅನುದಿನವೂ ನರಳಾಡುತ್ತಿದ್ದಾರೆ. ಈಗ ಈ ಬಂಡವಾಳಶಾಹಿಗಳ ಕಣ್ಣು ನಮ್ಮ ನಿತ್ಯದ ಅನ್ನದ ತಟ್ಟೆಯ ಮೇಲೆ ಬಿದ್ದಿದೆ.

ಕೃಷಿ ಕ್ಷೇತ್ರದಲ್ಲಿ ನಾವು ನಿತ್ಯ ಉಣ್ಣುವ ಭತ್ತದಂತಹ ಮೂಲಭೂತ ಆಹಾರ ಬೆಳೆಗೆ ಅಪಾಯಕಾರಿ ಕುಲಾಂತರಿ ಬೀಜಗಳ ಸೃಷ್ಟಿ ಮತ್ತು ಕೃತಕ ಪ್ರಯೋಗಗಳನ್ನು ಮಾಡಲು ಸರ್ಕಾರಗಳು ಇದುವರೆಗೂ ಮುಂದಾಗಿರಲಿಲ್ಲ. ಆದರೆ ಈಗ ಹೈದರಾಬಾದ್‌ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆಯಂತಹ ಸರ್ಕಾರಿ ಸೌಧಗಳಲ್ಲಿ ಕುಳಿತ ವಿಜ್ಞಾನಿಗಳು ‘ಡಿಆರ್‌ಆರ್ ದಾನ್ 100’ (DRR Dhan 100) ಹಾಗೂ ‘ಪೂಸಾ ಡಿಎಸ್‌ಟಿ -1’ (Pusa DST-1) ಎಂಬ ಸುಂದರ ಹೆಸರುಗಳಿಟ್ಟು ಬಾರೀ ತಾಂತ್ರಿಕ ಪವಾಡಗಳನ್ನು ಮಾಡುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ.

ಇಲ್ಲಿರುವ ಅತ್ಯಂತ ಅಪಾಯಕಾರಿ ವಿಚಾರವೆಂದರೆ ‘ಸ್ವದೇಶಿ’ ಸೋಗು. ನಮ್ಮದೇ ದೇಶದ ಸರ್ಕಾರಿ ಸಂಶೋಧನಾ ಸಂಸ್ಥೆಗಳ ಹೆಸರಿನಲ್ಲಿ, ‘ಸಂಶೋಧನೆ’ ಎಂಬ ಮುಖವಾಡದ ಅಡಿಯಲ್ಲಿ ಈ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿರುವುದು. ಆದರೆ ಅಸಲಿ, ಸಂಗತಿಯೇ ಬೇರೆ! ಜಾಗತಿಕ ಬಹುರಾಷ್ಟ್ರೀಯ ಶ್ರೀಮಂತ ಬಂಡವಾಳಶಾಹಿ ಕಂಪನಿಗಳು ಈ ಸಂಸ್ಥೆಗಳ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡು, ತಂತ್ರಜ್ಞಾನ ಮತ್ತು ಪೇಟೆಂಟ್ ಹಕ್ಕುಗಳನ್ನು ಖರೀದಿಸಿ ಭಾರತೀಯ ಕೃಷಿ ಮಾರುಕಟ್ಟೆಯನ್ನು ಆಕ್ರಮಿಸುತ್ತಿವೆ. ‘ನಮ್ಮದೇ ವಿಜ್ಞಾನಿಗಳ ಶೋಧ’ ಎಂಬ ಭ್ರಮೆಯನ್ನು ಹುಟ್ಟಿಸಿ, ಭಾರತೀಯ ಕೃಷಿ ಮಾರುಕಟ್ಟೆಗೆ ಹಿಂಬಾಗಿಲಿನಿಂದ ಜಾಗತಿಕ ಕಾರ್ಪೊರೇಟ್ ರಾಕ್ಷಸರನ್ನು ಕರೆತರುವ ಇಂತಹ ಪ್ರಸಂಗಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿರಲಾರದು.

ತಾಂತ್ರಿಕವಾಗಿ ನೋಡಿದರೆ, ಈ ‘ಡಿಆರ್‌ಆರ್ ದಾನ್ 100’ ಮತ್ತು ‘ಪೂಸಾ ಡಿಎಸ್‌ಟಿ -1’ ನಂತಹ ತಳಿಗಳು ರೋಗ ನಿರೋಧಕತೆ ಅಥವಾ ಹವಾಮಾನ ವೈಪರೀತ್ಯ ತಡೆದುಕೊಳ್ಳುವ ಜೀನ್-ಎಡಿಟಿಂಗ್ (Gene-editing) ಹಾಗೂ ಕೃತಕ ವಂಶವಾಹಿ ಪಲ್ಲಟದ ಮೂಲಕ ರೂಪುಗೊಂಡವು. ಗದ್ದೆಯಲ್ಲಿ ಬಿತ್ತನೆ ಮಾಡಿದಾಗ ಇವು ಮಾಡುವ ಮೊದಲ ಕೆಲಸವೆಂದರೆ ನೈಸರ್ಗಿಕ ಜೀವಜಾಲವನ್ನು ಧ್ವಂಸಗೊಳಿಸುವುದು. ಗಾಳಿ, ಜೇನುನೊಣ ಮತ್ತು ದುಂಬಿಗಳ ಮೂಲಕ ನಡೆಯುವ ನೈಸರ್ಗಿಕ ಪರಾಗಸ್ಪರ್ಶದಿಂದಾಗಿ ಈ ಕೃತಕ ಜೀನ್‌ಗಳು ಪಕ್ಕದ ಗದ್ದೆಗಳಿಗೆ ಹರಡುತ್ತವೆ. ಇದರ ಪರಿಣಾಮವೇನೆಂದರೆ? ನಮ್ಮ ಮಣ್ಣಿನ ಮಕ್ಕಳು ದಶಕಗಳಿಂದ ಜೋಪಾನವಾಗಿ ಉಳಿಸಿಕೊಂಡು ಬಂದ ರಾಜಮುಡಿ, ಜಯಾ ಭತ್ತ, ಗೌರಿಭತ್ತ, ಸಣ್ಣ ಅಕ್ಕಿಯಂತಹ ಪಾರಂಪರಿಕ ತಳಿಗಳ ಅನುವಂಶಿಕ ಶುದ್ಧತೆ ಶಾಶ್ವತವಾಗಿ ನಾಶವಾಗಿ ಕಲುಷಿತಗೊಳ್ಳುತ್ತದೆ.

ನೋಡಿ, ಕೃಷಿ ಎಂದರೆ ಕೇವಲ ಲಾಭ-ನಷ್ಟದ ತಾಂತ್ರಿಕ ಲೆಕ್ಕಾಚಾರವಲ್ಲ; ಅದೊಂದು ಜೀವಪರವಾದ ಸಂವೇದನೆ. ಸಾವಿರಾರು ವರ್ಷಗಳಿಂದ ಭಾರತೀಯ ರೈತನಿಗೆ ತಾನು ಬೆಳೆದ ಬೆಳೆಯಲ್ಲಿಯೇ ಮುಂದಿನ ಹಂಗಾಮಿಗೆ ಬೀಜ ಶೇಖರಿಸಿಟ್ಟುಕೊಳ್ಳುವ ಅಪಾರ ಸ್ವಾತಂತ್ರ್ಯ ಮತ್ತು ಕೃಷಿ ಸಾರ್ವಭೌಮತ್ವವಿತ್ತು. ಬೀಜ ಎಂಬುದು ರೈತನ ಆತ್ಮಗೌರವದ ಸಂಕೇತವಾಗಿತ್ತು. ಆದರೆ ಸ್ವದೇಶಿ ಹೆಸರಿನಲ್ಲಿ ಬರುವ ಈ ಪೇಟೆಂಟ್ ತಳಿಗಳು ರೈತನ ಈ ‘ಬೀಜ ಸ್ವಾತಂತ್ರ್ಯ’ವನ್ನೇ ಕಸಿದುಕೊಳ್ಳುತ್ತವೆ.

ಒಮ್ಮೆ ಈ ಬೀಜ ಗದ್ದೆಗೆ ಬಿತ್ತಿದರೆ, ಮುಂದಿನ ವರ್ಷವೂ ರೈತ ದುಬಾರಿ ಬೆಲೆ ತೆತ್ತು ಅದೇ ಕಂಪನಿಗಳ ಬಾಗಿಲಿಗೆ ಹೋಗಿ ಕೈಚಾಚಿ ನಿಲ್ಲಬೇಕು. ಬೀಜಕ್ಕೂ ಗುಲಾಮ, ಆ ತಳಿಗೆಂದೇ ಸೃಷ್ಟಿಸಲಾದ ನಿರ್ದಿಷ್ಟ ಕಂಪನಿಯ ರಾಸಾಯನಿಕ ಗೊಬ್ಬರ-ಕ್ರಿಮಿನಾಶಕಕ್ಕೂ ಗುಲಾಮ! ರೈತನ ಶ್ರಮದಿಂದ ಬರುವ ಕೃಷಿ ಆದಾಯವನ್ನು ಪೂರ್ತಿಯಾಗಿ ಕಸಿದುಕೊಂಡು, ಶ್ರೀಸಾಮಾನ್ಯ ರೈತನನ್ನು ತನ್ನದೇ ಭೂಮಿಯಲ್ಲಿ ಕಾರ್ಪೊರೇಟ್ ಕಂಪನಿಗಳ ದಾಸ್ಯಕ್ಕೆ ತಳ್ಳುವ ಅತ್ಯಂತ ವ್ಯವಸ್ಥಿತ ಸಂಚು ಇದಾಗಿದೆ.

ಕರ್ನಾಟಕದ ಅನ್ನದ ಬಟ್ಟಲು ಮಂಡ್ಯದ ಮೇಲೆ ಈ ತಳಿಗಳು ಯಾವ ಪರಿಣಾಮ ಉಂಟುಮಾಡಬಹುದು? ಕಾವೇರಿ ಕಣಿವೆ ಮಂಡ್ಯದ ಫಲವತ್ತಾದ ಮಣ್ಣಿಗೆ ಇಂತಹ ತಳಿಗಳು ಮತ್ತು ಅವುಗಳ ಜೊತೆ ಬರುವ ರಾಸಾಯನಿಕಗಳು ಪ್ರವೇಶಿಸಿದರೆ, ಅದು ಇಲ್ಲಿನ ನೀರಾವರಿ ವ್ಯವಸ್ಥೆ ಮತ್ತು ಜಲಚರಗಳನ್ನಷ್ಟೇ ಅಲ್ಲ, ಇಡೀ ಕೃಷಿ ಸಂಸ್ಕೃತಿಯನ್ನೇ ವಿಷಪೂರಿತಗೊಳಿಸುತ್ತದೆ. ನಾಲೆ ನೀರಿಗೆ ಈ ರಾಸಾಯನಿಕಗಳು ಬೆರೆತು, ಕಾವೇರಿಯ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರು ಮತ್ತು ಇಡೀ ಜೀವ ಪರಿಸರವೇ ನಾಶವಾಗುತ್ತದೆ. ಮಂಡ್ಯದ ಸಣ್ಣ ಹಿಡುವಳಿದಾರ ರೈತರು ಬಂಡವಾಳಶಾಹಿಗಳ ದುಬಾರಿ ಬೀಜಗಳ ಸುಳಿಗೆ ಸಿಲುಕಿ ಆರ್ಥಿಕವಾಗಿ ಅಪಾರ ನಷ್ಟ ಅನುಭವಿಸಲಿದ್ದಾರೆ.

ಇನ್ನೊಂದು ಗಂಭೀರ ವಿಚಾರವೇನೆಂದರೆ, ಈ ಕುಲಾಂತರಿ ಬೀಜಗಳ ಹಿಂದಿರುವ ಕಾರ್ಪೊರೇಟ್ ಧನದಾಹ ಕೇವಲ ಬೀಜ ಮಾರಾಟಕ್ಕಷ್ಟೇ ಸೀಮಿತವಾಗಿಲ್ಲ; ಇದರ ಹಿಂದೆ ಅದಕ್ಕಿಂತ ಭೀಕರವಾದ ಇನ್ನೊಂದು ಹುನ್ನಾರ ಅಡಗಿದೆ. ಕಳೆದ ಐದು ವರ್ಷಗಳ ಅಂಕಿಅಂಶಗಳನ್ನು ಒಮ್ಮೆ ತೆಗೆದುನೋಡಿ. ಈ ದೇಶದ ಆರೋಗ್ಯ ಕ್ಷೇತ್ರದ ಮೇಲೆ ವಿದೇಶಿ ನೇರ ಹೂಡಿಕೆ (FDI) ಅತಿ ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಿದೆ. ಕಾರ್ಪೊರೇಟ್ ಆಸ್ಪತ್ರೆಗಳು ಗಲ್ಲಿಗಲ್ಲಿಯಲ್ಲೂ ತಲೆಎತ್ತುತ್ತಿವೆ. ಇದಕ್ಕೆ ಮತ್ತು ಕುಲಾಂತರಿ ಭತ್ತಕ್ಕೆ ಏನು ಸಂಬಂಧ ಎಂದು ನಿಮಗನಿಸಬಹುದು. ಸಂಬಂಧ ಖಂಡಿತ ಇದೆ!

ಈ ಕೃತಕ ತಳಿಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಬಳಕೆಯಾಗುವ ‘ಆಂಟಿಬಯೋಟಿಕ್ ಮಾರ್ಕರ್ ಜೀನ್‌ಗಳು’ ಮತ್ತು ಅನ್ಯ ಜೀವಿಗಳ ಪ್ರೋಟೀನ್‌ಗಳು ಆಹಾರದ ಮೂಲಕ ಮನುಷ್ಯನ ಜೀರ್ಣಾಂಗ ವ್ಯವಸ್ಥೆಯನ್ನು ತಲುಪಿದಾಗ ನವೀನ ರೀತಿಯ ಅಲರ್ಜಿಗಳು, ಜೀರ್ಣಾಂಗ ಸಂಬಂಧಿತ ಕಾಯಿಲೆಗಳು ಮತ್ತು ಆಂಟಿಬಯೋಟಿಕ್ ನಿರೋಧಕತೆ ಹುಟ್ಟಿಕೊಳ್ಳುತ್ತದೆ. ಅಂದರೆ, ಕೃಷಿಯಲ್ಲಿ ಕುಲಾಂತರಿ ಅಕ್ಕಿ ತಿನ್ನಿಸಿ ಶ್ರೀಸಾಮಾನ್ಯರನ್ನು ಹೊಸ ಹೊಸ ವಿಚಿತ್ರ ಕಾಯಿಲೆಗಳಿಗೆ ತುತ್ತು ಮಾಡುವುದು, ತನ್ಮೂಲಕ ಅವರನ್ನು ವಿದೇಶಿ ಬಂಡವಾಳ ಹರಿದುಬಂದಿರುವ ಖಾಸಗಿ ಆಸ್ಪತ್ರೆಗಳ ಕಾಯಂ ಗ್ರಾಹಕರನ್ನಾಗಿ ಮಾಡುವುದು! ಇತ್ತ ಬೀಜ ಮಾರಿ ಕೃಷಿ ಆದಾಯ ದೋಚುವುದು, ಅತ್ತ ರೋಗ ಸೃಷ್ಟಿಸಿ ಆಸ್ಪತ್ರೆಗಳಲ್ಲಿ ದೋಚುವುದು. ಇದು ಕಾರ್ಪೊರೇಟ್ ಕಂಪನಿಗಳ ದ್ವಿಮುಖ ಧನದಾಹದ ಭೀಕರ ಜಾಲ.

ವಿಜ್ಞಾನ ಮತ್ತು ತಂತ್ರಜ್ಞಾನಗಳು ಮಾನವೀಯತೆಯ ಪರವಾಗಿರಬೇಕೇ ಹೊರತು, ‘ಸ್ವದೇಶಿ’ ಎಂಬ ನಕಲಿ ಮುಖವಾಡ ಧರಿಸಿ ಬಹುರಾಷ್ಟ್ರೀಯ ಬಂಡವಾಳಶಾಹಿಗಳಿಗೆ ದಾಸ್ಯ ವಹಿಸುವುದಕ್ಕಲ್ಲ. ನಮ್ಮ ದೇಶದ ಸಾರ್ವಜನಿಕರ ಹೊಟ್ಟೆಯನ್ನು ತಮ್ಮ ಪ್ರಯೋಗಾಲಯ ಮಾಡಿಕೊಳ್ಳುತ್ತಿರುವ ಈ ಕಾರ್ಪೊರೇಟ್ ರಾಕ್ಷಸರಿಗೆ ಮತ್ತು ಅವರಿಗೆ ಕೆಂಪು ಹಾಸು ಹಾಸುತ್ತಿರುವ ಆಳುವ ಸರ್ಕಾರಗಳಿಗೆ ನಾವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕಾಗಿದೆ.

ಕೂಡಲೇ ಸರ್ಕಾರಗಳು ಈ ಕುಲಾಂತರಿ ಭತ್ತದ ತಳಿಗಳ ಸಾಗುವಳಿ, ಪ್ರಯೋಗ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಇಲ್ಲವಾದರೆ, ಮುಂದಾಗುವ ಅಪಾರ ಪರಿಸರ ನಾಶ, ಪಾರಂಪರಿಕ ತಳಿಗಳ ಕಣ್ಮರೆ, ರೈತರಿಗಾಗುವ ಭೀಕರ ನಷ್ಟ ಹಾಗೂ ಸಾರ್ವಜನಿಕರ ಆರೋಗ್ಯ ದುರಂತಕ್ಕೆ ಸರ್ಕಾರಗಳೇ ನೇರ ಹೊಣೆ ಹೊರಬೇಕಾಗುತ್ತದೆ. ನಿಸರ್ಗವನ್ನು ಮತ್ತು ರೈತನನ್ನು ಗೆಲ್ಲುತ್ತೇವೆ ಎಂಬ ಬಂಡವಾಳಶಾಹಿಗಳ ಅಹಂಕಾರವನ್ನು ಮೆಟ್ಟಿ ನಿಂತು, ನಮ್ಮ ಮಣ್ಣು, ಬೀಜ ಮತ್ತು ಆಹಾರದ ಸಾರ್ವಭೌಮತ್ವವನ್ನು ಕಾಯ್ದುಕೊಳ್ಳುವುದೇ ಇಂದಿನ ತುರ್ತು ಅಗತ್ಯ.

ಲೇಖಕರು: ಪ್ರೊ.ಸತ್ಯಮೂರ್ತಿ, ಮುಖ್ಯಸ್ಥರು, ರೈತರ ಶಾಲೆ, ಮಂಡ್ಯ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ