ಮಂಡ್ಯ : ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಡ್ಯ ನಗರದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.
‘ಗಾಂಧಿ ಹಾದಿಯಲ್ಲಿ ಒಂದು ಹೆಜ್ಜೆ’ ಎಂಬ ಆಶಯದೊಂದಿಗೆ ಮಂಡ್ಯ ನಗರಸಭೆ ಹಾಗೂ ಡಿಸಿ ಪಾರ್ಕ್ ಬೆಳಗಿನ ವಾಯುವಿಹಾರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಚಾಲನೆ ನೀಡಿದರು.
ಬೆಳಗಿನ ಜಾವ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಸ್ವತಃ ಶ್ರಮದಾನದಲ್ಲಿ ಭಾಗವಹಿಸಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಕೈಗೊಂಡರು. ಸ್ವಚ್ಛತಾ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರ ಓಡಾಟದ ರಸ್ತೆಗಳಲ್ಲಿರುವ ಗೋಡೆಗಳಿಗೆ ಸ್ವತಃ ಬ್ರಷ್ ಹಿಡಿದು ಬಣ್ಣ ಬಳಿಯುವ ಮೂಲಕ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಸಂದೇಶ ಸಾರಿದರು.
ಸ್ವಚ್ಛತೆ ಜನಪ್ರತಿನಿಧಿಗಳ ಕರ್ತವ್ಯ ಮಾತ್ರವಲ್ಲ: ಶಾಸಕ
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ, ಮಹಾತ್ಮ ಗಾಂಧೀಜಿ ಅವರ ಜಯಂತಿಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಶ್ರಮದಾನ ಆಯೋಜಿಸಿರುವುದು ಅರ್ಥಪೂರ್ಣವಾದ ಕಾರ್ಯವಾಗಿದೆ ಎಂದು ಹೇಳಿದರು.

ಸ್ವಚ್ಛತೆ ಕಾಪಾಡುವುದು ಅಥವಾ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯವಲ್ಲ. ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆ, ಸುತ್ತಮುತ್ತಲಿನ ಪ್ರದೇಶ ಹಾಗೂ ಸಾರ್ವಜನಿಕ ಪರಿಸರವನ್ನು ಸ್ವಚ್ಛವಾಗಿಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸ್ವಚ್ಛತೆಯ ಅರಿವು ಪ್ರತಿಯೊಬ್ಬರ ಬದುಕಿನ ಭಾಗವಾದಾಗ ಮಾತ್ರ ಸ್ವಚ್ಛ ಹಾಗೂ ಸುಂದರ ನಗರ, ಪಟ್ಟಣ ಮತ್ತು ಗ್ರಾಮಗಳನ್ನು ನಿರ್ಮಿಸಲು ಸಾಧ್ಯ. ಪರಿಸರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಎಲ್ಲರದ್ದೂ ಆಗಿದ್ದು, ಇದನ್ನು ಜನರು ತಮ್ಮ ಜೀವನಶೈಲಿಯಲ್ಲೇ ಅಳವಡಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಮಹಾತ್ಮ ಗಾಂಧೀಜಿ ಅವರ ತತ್ವ–ಸಿದ್ಧಾಂತಗಳಲ್ಲಿ ಸ್ವಚ್ಛತೆ ಮತ್ತು ಪರಿಸರ ಕಾಳಜಿಗೆ ಮಹತ್ವದ ಸ್ಥಾನವಿತ್ತು. ಅಂತಹ ಮಹತ್ವದ ವಿಚಾರವನ್ನು ಮುಂದಿಟ್ಟುಕೊಂಡು ಬೆಳಗಿನ ವಾಯುವಿಹಾರ ಗೆಳೆಯರ ಬಳಗದವರು ಶ್ರಮದಾನ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ. ಅವರೊಂದಿಗೆ ತಾವೂ ಭಾಗವಹಿಸಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.
ಇಂತಹ ಸಮಾಜಮುಖಿ ಕಾರ್ಯಗಳು ಸಾರ್ವಜನಿಕರಲ್ಲಿ, ಅದರಲ್ಲೂ ಯುವ ಸಮುದಾಯದಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜವಾಬ್ದಾರಿ ಮೂಡಿಸಲು ಸಹಕಾರಿಯಾಗಬೇಕು. ಹಿರಿಯರು ಹಾಗೂ ನಾಗರಿಕ ಸಂಘಟನೆಗಳು ಆರಂಭಿಸಿರುವ ಇಂತಹ ಕಾರ್ಯಗಳಿಂದ ಯುವಕರು ಪ್ರೇರಣೆ ಪಡೆದು ಸ್ವಚ್ಛತಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆಶಿಸಿದರು.
ಸ್ವಚ್ಛತೆ ಮನಸ್ಸಿಗೆ ಸಂಬಂಧಿಸಿದ ವಿಚಾರ:ಡಾ.ಕುಮಾರ
ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, ಅಕ್ಟೋಬರ್ 2 ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುವ ದಿನವಾಗಿದ್ದು, ಅವರ ವಿಚಾರಗಳಿಂದ ಪ್ರೇರಣೆ ಪಡೆದು ಸ್ವಚ್ಛತಾ ಶ್ರಮದಾನ ನಡೆಸಿರುವುದು ಶ್ಲಾಘನೀಯ ಎಂದು ಹೇಳಿದರು.
ಸ್ವಚ್ಛತೆ ಎನ್ನುವುದು ಕೇವಲ ಹೊರಗಿನ ಪರಿಸರಕ್ಕೆ ಸಂಬಂಧಿಸಿದ ವಿಚಾರವಲ್ಲ; ಅದು ಮನಸ್ಸಿಗೂ ಸಂಬಂಧಿಸಿದ ವಿಚಾರ. ಮನಸ್ಸು ಸ್ವಚ್ಛವಾಗಿದ್ದರೆ ಸಮಾಜವೂ ಸ್ವಚ್ಛವಾಗಿರುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು.
ಬೆಳಗಿನ ವಾಯುವಿಹಾರ ಗೆಳೆಯರ ಬಳಗದ ಸದಸ್ಯರು ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಅವರ ಕಾರ್ಯದಿಂದ ಮತ್ತಷ್ಟು ಜನರು ಪ್ರೇರಣೆ ಪಡೆದು ಸಾರ್ವಜನಿಕ ಹಿತದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರ, ಪಟ್ಟಣ, ಗ್ರಾಮ, ರಸ್ತೆ ಹಾಗೂ ಸಾರ್ವಜನಿಕ ಪರಿಸರವನ್ನು ಸ್ವಚ್ಛವಾಗಿಡುವುದು ಕೇವಲ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಲ್ಲ. ಸಾರ್ವಜನಿಕರೂ ಅದರಲ್ಲಿ ಕೈಜೋಡಿಸಬೇಕು. ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಮಹಾತ್ಮ ಗಾಂಧೀಜಿ ಅವರು ತಮ್ಮ ಕಾಲದಲ್ಲಿಯೇ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಸಮೃದ್ಧ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸರಳತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಇದೇ ಆಶಯದೊಂದಿಗೆ ಗೆಳೆಯರ ಬಳಗದವರು ನಡೆಸುತ್ತಿರುವ ಕಾರ್ಯ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಜಿಲ್ಲಾಧಿಕಾರಿ ಹಾರೈಸಿದರು.
ಶ್ರಮದಾನದ ಮೂಲಕ ಸಾಮಾಜಿಕ ಸಂದೇಶ
ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ ಸಾರ್ವಜನಿಕರ ಓಡಾಟದ ರಸ್ತೆ ಬದಿಯ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸುವ ಪ್ರಯತ್ನವೂ ನಡೆಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದು, ಸ್ವಚ್ಛತೆ ಎಂಬುದು ಎಲ್ಲರ ಸಹಭಾಗಿತ್ವದಿಂದ ಸಾಧ್ಯ ಎಂಬ ಸಂದೇಶವನ್ನು ಸಾರಿತು.
ಗಾಂಧೀಜಿ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಸ್ವಚ್ಛತೆಯ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವಾಗಿ ಈ ಶ್ರಮದಾನ ಕಾರ್ಯಕ್ರಮ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ನಗರಸಭೆ ಅಧಿಕಾರಿಗಳು, ಗ್ಯಾರಂಟಿ ಸಮಿತಿ ಅಧ್ಯಕ್ಷ ರುದ್ರಪ್ಪ, ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ, ಮುಡಾ ಮಾಜಿ ನಿರ್ದೇಶಕ ಎಂ. ಕೃಷ್ಣ,ಮುಖಂಡರಾದ ಹೊಸಹಳ್ಳಿ ರಮೇಶ್, ಬೋರೇಗೌಡ, ವಿಷಕಂಠ, ಸೋಮಣ್ಣ, ಆನಂದ್,ತಿಮ್ಮೇಗೌಡ,ನವೀನ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಹಾಗೂ ಬೆಳಗಿನ ವಾಯುವಿಹಾರ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.




