Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸ್ಮಾರ್ಟ್ ಸಿಟಿಯಾಗಿ ಮಂಡ್ಯ ರೂಪಿಸಲು ಶಾಸಕ ರವಿಕುಮಾರ್ ನೂತನ ಯೋಜನೆ

ಮಂಡ್ಯ : ನಗರದ ನೂರಡಿ ರಸ್ತೆಯಲ್ಲಿರುವ 12 ಎಕರೆ ಸರ್ಕಾರಿ ಜಾಗದಲ್ಲಿ ಅಪಾರ್ಟ್‌ಮೆಂಟ್, ಮಲ್ಟಿಪ್ಲೆಕ್ಸ್, ಸ್ಪೋರ್ಟ್ಸ್ ಗ್ರೌಂಡ್, ಪಾರ್ಕ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ಸಮಗ್ರ ಯೋಜನೆಗೆ ಶಾಸಕ‌ ರವಿಕುಮಾರ್ ಗೌಡ ಮುಂದಾಗಿದ್ದಾರೆ.

ಸಕ್ಕರೆ ನಾಡು ಮಂಡ್ಯವನ್ನು ಆಧುನಿಕ ನಗರವಾಗಿ ರೂಪಿಸಿ, ಜನರಿಗೆ ಅತ್ಯಾಧುನಿಕ ನಗರ ಸೌಲಭ್ಯಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯ ನೀಲ ನಕ್ಷೆಯನ್ನು ಶಾಸಕರು ಸಿದ್ಧಪಡಿಸಿದ್ದಾರೆ. ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಮಾದರಿಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಿದ್ಧಪಡಿಸಿರುವ ವಿಶೇಷ ಮಾಸ್ಟರ್ ಪ್ಲಾನ್ ಅನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಮುಂದಿಟ್ಟಿದ್ದು, ಮಂಡ್ಯದ ಭವಿಷ್ಯದ ನಗರಾಭಿವೃದ್ಧಿಗೆ ಹೊಸ ರೂಪ ನೀಡುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.

ನೂರಡಿ ರಸ್ತೆಯಲ್ಲಿರುವ 12 ಎಕರೆ ಸರ್ಕಾರಿ ಪ್ರದೇಶವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ, ಒಂದೇ ಸ್ಥಳದಲ್ಲಿ ವಸತಿ, ಮನರಂಜನೆ, ಕ್ರೀಡೆ ಹಾಗೂ ಸಾರ್ವಜನಿಕ ಬಳಕೆಯ ಸೌಲಭ್ಯಗಳನ್ನು ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಸಿದ್ಧಪಡಿಸಿರುವ ಯೋಜನೆಯಲ್ಲಿ ಅಪಾರ್ಟ್‌ಮೆಂಟ್‌ಗಳು, ಮಲ್ಟಿಪ್ಲೆಕ್ಸ್ ಚಿತ್ರಮಂದಿರ, ಸ್ಪೋರ್ಟ್ಸ್ ಗ್ರೌಂಡ್, ಸುಸಜ್ಜಿತ ರಸ್ತೆಗಳು, ಮಕ್ಕಳ ಆಟಕ್ಕೆ ಉದ್ಯಾನವನ, ಈಜುಕೊಳ ಹಾಗೂ ಮಲ್ಟಿ ಜಿಮ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾವನೆಗಳಿವೆ.

ಶಾಸಕರು ಸಿದ್ಧಪಡಿಸಿರುವ ಯೋಜನೆಯ ರೂಪುರೇಷೆಗಳನ್ನು ಅಧಿಕಾರಿಗಳು ಇಂದು ಕೆಡಿಪಿ ಸಭೆಯಲ್ಲಿ ಸಚಿವರ ಮುಂದೆ ಸಂಕ್ಷಿಪ್ತವಾಗಿ ವಿವರಿಸಿದರು. ಮಂಡ್ಯ ನಗರದ ಬೆಳವಣಿಗೆಗೆ ಪೂರಕವಾಗುವಂತೆ ನೂತನ ಸೌಲಭ್ಯಗಳನ್ನು ಒಂದೇ ಪ್ರದೇಶದಲ್ಲಿ ಅಭಿವೃದ್ಧಿಪಡಿಸುವ ಚಿಂತನೆಗೆ ಸಚಿವರ ಗಮನ ಸೆಳೆಯಲಾಯಿತು.

ಈ ಸಂದರ್ಭದಲ್ಲಿ ಬಿಡದಿಯಲ್ಲಿ 12 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ನಿರ್ಮಿಸುವ ಯೋಜನೆಯ ಬಗ್ಗೆಯೂ ಸಚಿವ ಚಲುವರಾಯಸ್ವಾಮಿ ಪ್ರಸ್ತಾಪಿಸಿದರು. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ರೂಪುಗೊಂಡಿದ್ದ ಈ ಯೋಜನೆಯನ್ನು ಮುಖ್ಯಮಂತ್ರಿ ಡಿ‌.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಸರ್ಕಾರ ಮುಂದುವರಿಸಲು ಮುಂದಾದರೂ, ವಿವಿಧ ಅಡೆತಡೆಗಳು ಹಾಗೂ ವಿರೋಧದ ಹಿನ್ನೆಲೆಯಲ್ಲಿ ರೆಡ್‌ಜೋನ್ ಸಮಸ್ಯೆ ಎದುರಾಯಿತು ಎಂದು ವಿವರಿಸಿದರು.

ಮುಖ್ಯಮಂತ್ರಿಗಳೇ ಟೌನ್‌ಶಿಪ್ ನಿರ್ಮಾಣದಂತಹ ಮಹತ್ವದ ಯೋಜನೆಗೆ ಮುಂದಾಗಿರುವಾಗ ಮಂಡ್ಯ ನಗರವೂ ಆಧುನಿಕ ಹಾಗೂ ಆಕರ್ಷಕ ನಗರವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಶಾಸಕ ಗಣಿಗ ರವಿಕುಮಾರ್ ಸ್ಮಾರ್ಟ್ ಸಿಟಿ ನಿರ್ಮಾಣದ ಚಿಂತನೆ ನಡೆಸಿರುವುದು ಉತ್ತಮ ಪ್ರಯತ್ನ.ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತಕತೆ ನಡೆಸುವುದಾಗಿ ತಿಳಿಸಿದರು.

ಇಂತಹ ಮಹತ್ವದ ನಗರಾಭಿವೃದ್ಧಿ ಯೋಜನೆಯನ್ನು ರೂಪಿಸುವಾಗ ಮೊದಲು ಸ್ಥಳೀಯ ಜನರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಮತ್ತು ಅಗತ್ಯಗಳನ್ನು ಪರಿಗಣಿಸಿ ಮುಂದುವರಿಯಬೇಕು. ಜನರ ಸಹಮತದೊಂದಿಗೆ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ಮುಂದಾದರೆ ಸರ್ಕಾರ ಸಂಪೂರ್ಣವಾಗಿ ಶಾಸಕರ ಬೆಂಬಲಕ್ಕೆ ನಿಲ್ಲಲಿದೆ ಎಂದು ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದರು.

ಒಟ್ಟಾರೆ, ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ಅಪಾರ್ಟ್‌ಮೆಂಟ್‌ಗಳಿಂದ ಹಿಡಿದು ಕ್ರೀಡಾಂಗಣ, ಮನರಂಜನಾ ಕೇಂದ್ರ, ಉದ್ಯಾನವನ ಹಾಗೂ ಆರೋಗ್ಯಕರ ಜೀವನಶೈಲಿಗೆ ಪೂರಕವಾದ ಸೌಲಭ್ಯಗಳನ್ನು ಒಳಗೊಂಡ ಸ್ಮಾರ್ಟ್ ಸಿಟಿ ಮಾದರಿಯ ಅಭಿವೃದ್ಧಿ ಯೋಜನೆ ರೂಪಿಸುವ ಶಾಸಕ ಗಣಿಗ ರವಿಕುಮಾರ್ ಅವರ ಪ್ರಯತ್ನ ನಗರಾಭಿವೃದ್ಧಿಯ ಹೊಸ ಆಶಯ ಮೂಡಿಸಿದೆ.ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಮಂಡ್ಯದ ನಗರೀಕರಣಕ್ಕೆ ಹೊಸ ಆಯಾಮ ದೊರೆಯುವ ನಿರೀಕ್ಷೆಯಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ