ಮನುಷ್ಯನಲ್ಲಿ ಸ್ವಯಂ ತೃಪ್ತಿ, ಸಂತೋಷ, ಕರುಣೆ, ಪ್ರೀತಿಯ ಸಮ್ಮೋಹನಗೊಳಿಸಿವ ಅಗಾಧಶಕ್ತಿ ಸಂಗೀತಕ್ಕಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ಸುರೇಶ್ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ಕಲಾಶ್ರೀ ಮ್ಯೂಸಿಕಲ್ ಟ್ರಸ್ಟ್ ಮಂಡ್ಯ ಇವರು ಆಯೋಜಿಸಿದ್ದ ಸಂಗೀತ ಶಾಲೆಯ 19ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಹಾಗೂ ಡಾ.ಪುನೀತ್ ರಾಜಕುಮಾರ್‌ಗೆ ಗೀತಾನಮನ ಮತ್ತು ಸಾಧಕರಿಗೆ ಸನ್ಮಾನ, ಸಂಗೀತ ಸಂಭ್ರಮ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ದೊಡ್ಡ ಅಸ್ತ್ರ ಸಂಗೀತ. ಸಂಗೀತದಿಂದ ಪರಸ್ಪರ ಸಹಬಾಳ್ವೆ ಸಹಕಾರ ಗೌರವ ಬೆಳೆಯುತ್ತದೆ. ಗ್ರಾಮೀಣ ಮಕ್ಕಳಿಗೆ ಸಂಗೀತ ಕಲಿಕೆಯನ್ನು ನೀಡುತ್ತಿರುವ ನಾಗಮಂಗಲ ಶ್ರೀನಿವಾಸ್ ಅವರ ಸೇವೆ ನಾಡಿನದ್ದಕ್ಕೂ ಪಸರಿಸಲಿ ಇವರ ಗಾಯನ ಕಲಿಕೆಯಿಂದ ಮಕ್ಕಳು ಸಂಗೀತ ಕ್ಷೇತ್ರದಲ್ಲಿ ಪ್ರಜ್ವಲಿಸಿ ಬೆಳೆಯಲಿ ಎಂದರು.
ಕಾರ್ಯಕ್ರಮವನ್ನು ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ವಿನೋದ್ ಉದ್ಘಾಟಿಸಿದರು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಗೀತ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಕೆ ಪುರುಷೋತ್ತಮ್, ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾಶ್ರೀನಿವಾಸ್, ಟ್ರಸ್ಟಿಗಳಾದ ನಾಗಮಂಗಲ ಶ್ರೀನಿವಾಸ್, ಸಂಚಾಲಕ ಜಿ.ಕೆ ಶಂಕರ್ ಹಾಜರಿದ್ದರು.




