ಮಡಿವಾಳ ಮಾಚಿದೇವರ ತತ್ವ-ಆದರ್ಶದ ಹಾದಿಯಲ್ಲಿ ನಾವೆಲ್ಲ ಸಾಗಿ ಸಮಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಮೂಡಬಿದರೆ ಶ್ರೀಕರಿಂಜೆಮಠದ ಪೀಠಾಧ್ಯಕ್ಷ ಮುಕ್ತಾನಾಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ,ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಅಭಿನಂದನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
12ನೇ ಶತಮಾನದಿಂದ 21ನೇ ಶತಮಾನದವರೆಗೂ ಮಡಿವಾಳ ಸಮಾಜ ಅಭಿವೃದ್ಧಿಯಾಗದಿರುವುದಕ್ಕೆ ಮೂಲ ಕಾರಣ ಮಡಿವಾಳ ಮಾಚಿದೇವ ಅವರ ಆದರ್ಶಗಳನ್ನು ಅರ್ಥಮಾಡಿಕೊಳ್ಳದಿರುವುದು.ವೀರತ್ವವನ್ನು ಅರಿಯದಿರುವುದಾಗಿದೆ ಎಂದು ಎಚ್ಚರಿಸಿದರು.

ಸಂಘಟನೆಯಲ್ಲಿ ಒಡಕು, ಒಗ್ಗೂಡುವ ಮನಸ್ಥಿತಿ ಇಲ್ಲದಿರುವುದು, ಸಮಾಜ ಕಟ್ಟಲು ಬಂದವರನ್ನು ದೂಷಿಸುವ ದುರ್ಗುಣಗಳೇ ಸಮಾಜ ಉದ್ಧಾರವಾಗದಿರಲು ಕಾರಣಯಾಗಿದೆ.ಈ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಸಾಧಿಸುವುದು ಇನ್ನೂ ಯಾವಾಗ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಮಡಿವಾಳ ಸಮಾಜವು ಸದೃಢವಾಗಿ ಬೆಳೆಯಲು ಸಂಘಟನೆ, ಸಮಾಜ, ಸಂತರು ಈ ಮೂರು ಒಟ್ಟಿಗೆ ಸಾಗಬೇಕಿದೆ. ಆಗ ಮಾತ್ರ ಸಮಗ್ರ ಅಭಿವೃದ್ದಿಯಾಗಲಿಕ್ಕೆ ಸಾಧ್ಯವಿದೆ ಎಂದರು.
ಮಾಜಿ ಶಾಸಕ ಎ.ಬಿ.ರಮೇಶ್ಬಾಬು ಬಂಡಿಸಿದ್ದೇಗೌಡ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಬಂದರೂ ಸಮಾಜವನ್ನು ಅಭಿವೃದ್ಧಿ ಪಡಿಸುವ ಮತ್ತು ಅತಿ ಹಿಂದುಳಿದ ಸಮಾಜಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕಿದೆ ಎಂದು ಆಗ್ರಹಿಸಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಮಡಿವಾಳ ಸಮಾಜ ಅತ್ಯಂತ ಶೋಚನೀಯವಾಗಿ ಹಿಂದುಳಿದ ಸಮಾಜವಾಗಿದೆ, ಉತ್ತಮ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ದಿಗೆ ಆಧ್ಯತೆ ನೀಡಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ನಿವೃತ್ತ ಶಿಕ್ಷಕ ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 75 ಮಂದಿ ಮಡಿವಾಳ ಸಮಾಜದವರು ಗ್ರಾಮ ಪಂಚಾಯಿತಿಯಲ್ಲಿ ಗೆಲುವು ಸಾಧಿಸಿ ಸದಸ್ಯರಾಗಿರುವುದು ಸಂತಸದ ವಿಚಾರ. ಹಾಗೆ ನಗರಸಭೆ, ಪುರಸಭೆಗಳಲ್ಲೂ ಗೆಲುವು ಸಾಧಿಸಿ ಜನಪ್ರತಿನಿಧಿಗಳಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಗರಸಭೆ, ಪುರಸಭೆ, ಗ್ರಾ.ಪಂ.ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಟಿ.ಆರ್.ಪ್ರಕಾಶ್, ಬಿಜೆಪಿ ಮುಖಂಡ ಹೊಸಹಳ್ಳಿ ನಾಗೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ವಿಶ್ವಕರ್ಮ, ಕೆ.ಆರ್.ಪೇಟೆ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಸಿದ್ದೇಶ್, ಕೆಪಿಸಿಸಿ ಒಬಿಸಿ ರಾಜ್ಯಕಾರ್ಯದರ್ಶಿ ವಕೀಲ ಸೋಮಶೇಖರ್, ಸಂಘದ ಪದಾಧಿಕಾರಿಗಳು ಮತ್ತಿತರಿದ್ದರು.




