Sunday, May 5, 2024

ಪ್ರಾಯೋಗಿಕ ಆವೃತ್ತಿ

ಗೌರಿ ಲಂಕೇಶ್ ಹತ್ಯೆಯ ಕರಾಳ ದಿನಕ್ಕೆ 6 ವರ್ಷ: ಹೋರಾಟಗಾರರು, ಒಡನಾಡಿಗಳಿಂದ ನುಡಿನಮನ

ಚಿಂತಕಿ, ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಇಂದಿಗೆ 6 ವರ್ಷಗಳು ಕಳೆದಿವೆ. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೌರಿ ಸಮಾಧಿಯ ಬಳಿ ಸೇರಿದ ಹೋರಾಟಗಾರರು, ಒಡನಾಡಿಗಳು ನುಡಿನಮನ ಸಲ್ಲಿಸಿದರು ಗೌರವ ನಮನ ಸಲ್ಲಿಸಿದರು.

ಈ ಗೌರವನಮನ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಗೌರಿ ಲಂಕೇಶ್ ಅವರ ಒಡನಾಡಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಸಮಾಧಿಗೆ ಪುಷ್ಪನಮನ ಅರ್ಪಿಸಿ, ಅವರ ಹೋರಾಟವನ್ನು ಮೆಲುಕು ಹಾಕಿದರು.

ಈ ವೇಳೆ ಮಾತನಾಡಿದ ಹೋರಾಟಗಾರರಾದ ನೂರ್‌ ಶ್ರೀಧರ್‌ ಅವರು, ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿ, “ಸಣ್ಣದೊಂದು ನಿರಾಳತೆಯನ್ನು ಕಂಡಿದ್ದೇವೆ. ಸಣ್ಣದೊಂದು ನಿಟ್ಟುಸಿರು ಸಿಕ್ಕಿದೆ. ಗೌರಿಯವರ ಎದೆಯ ಮೇಲಿನ ಚಪ್ಪಡಿಯ ಭಾರ ಸ್ವಲ್ಪ ಕಡಿಮೆಯಾಗಿದೆ. ನಮ್ಮ ಕುತ್ತಿಗೆಯ ಮೇಲೆ ಕೂತಿದ್ದ ದುಸ್ವಪ್ನ ಮತ್ತು ದುರಾಡಳಿತವನ್ನು ಸ್ವಲ್ಪ ಮಟ್ಟಿಗೆ ಸರಿಸಿದ್ದೇವೆ” ಎಂದು ಬಣ್ಣಿಸಿದರು.

”ಹಲವು ಪರ್ಯಾಯ ಸಂಸ್ಥೆಗಳು ಚಿಗುರೊಡೆದಿವೆ. ಗೌರಿಯ ಕುಟುಂಬ ವಿಶಾಲವಾಗುತ್ತಿದೆ. ಎಲ್ಲ ಕಡೆ ಇರುವ ಜೀವಪರ ಕೊಂಡಿಗಳು ಬೆಸೆಯುತ್ತಿವೆ. ಗುರಿಯ ಜೊತೆ ಸಾಗುತ್ತಿದ್ದೇವೆ. 2024ಕ್ಕೆ ನಮ್ಮ ಜವಾಬ್ದಾರಿ ಹೆಚ್ಚಿದೆ” ಎಂದು ಎಚ್ಚರಿಸಿದರು.

ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ”ಗೌರಿಯಕ್ಕ ನಮಗೆಲ್ಲ ಒಂದು ಮಾದರಿ ಮತ್ತು ಅನುಕರಣೀಯ ವ್ಯಕ್ತಿತ್ವ. ಅವರು ಅಂದು ಹೇಳಿದ ಎಲ್ಲ ಮಾತುಗಳು ಇಂದು ಸತ್ಯವಾಗುತ್ತಿವೆ. ಮನೆಯ ಹಿರಿಯಕ್ಕನನ್ನು ಕಳೆದುಕೊಂಡಿದ್ದೇವೆ” ಎಂದು ಗೌರಿಯವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ಇನ್ನು ಗೌರಿಯವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, ”ಗೌರಿ ಕುಟುಂಬ ಬೆಳೆಯುತ್ತಿದೆ. ಇಂದು ಅವಳು ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು. ವೈಯಕ್ತಿಕವಾಗಿ ಸಿದ್ದರಾಮಯ್ಯನವರೆಂದರೆ ಆಕೆಗೆ ಪ್ರೀತಿ. ಅವಳ ಹೋರಾಟ ನಿರಂತರವಾಗಿರುತ್ತದೆ. ನಾವು 2024ಕ್ಕೆ ಮುನ್ನಡೆಯೋಣ” ಎನ್ನುತ್ತಾ ಗದ್ಗದಿತರಾದರು.

ನಟ ದುನಿಯಾ ವಿಜಯ್ ಮಾತನಾಡಿ, ”ಗೌರಿಯಕ್ಕ ಯಾವಾಗಲೂ ಬೆನ್ನು ತಟ್ಟುತ್ತಿದ್ದವರು. ಜಿಮ್‌ನಲ್ಲಿ ಸಿಗುತ್ತಿದ್ದರು. ನನ್ನ ಸ್ವಃತ ಅಕ್ಕನನ್ನು ಕಳೆದುಕೊಂಡಿದ್ದೇನೆ” ಎಂದರು.

”ನೂರು ಗುಂಡುಗಳು ತೂರಿ ಬಂದರೂ ಗುಡುಗುಡು ಗುಡುಗುಡು ಗುಡುಗುವೆವು” ಎಂಬ ಹಾಡಿಗೆ ಎಲ್ಲರೂ ದನಿ ಸೇರಿಸಿ, ಗೌರಿಯವರ ಆಶಯಗಳನ್ನು ಕಾಡಿಟ್ಟುಕೊಳ್ಳುವ ಸಂಕಲ್ಪ ಮಾಡಿದರು.

ಈ ವೇಳೆ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌, ರೈತ ನಾಯಕರಾದ ರಾಕೇಶ್ ಟಿಕಾಯತ್‌, ಬಲ್ವಿಂದರ್‌ ಸಿಂಗ್, ಗೌರಿಯವರ ತಾಯಿ ಇಂದಿರಾ ಲಂಕೇಶ್, ಗೌರಿ ಒಡನಾಡಿಗಳಾದ ಸಿರಿಮನೆ ನಾಗರಾಜ್, ಡಾ.ಎಚ್.ವಿ.ವಾಸು, ಕೆ.ಎಲ್.ಅಶೋಕ್, ವಿ.ಎಸ್.ಶ್ರೀಧರ್‌, ಶಿವಸುಂದರ್‌, ಮಲ್ಲಿಗೆ ಸಿರಿಮನೆ, ದು.ಸರಸ್ವತಿ, ದೀಪು ಮೊದಲಾದವರು ಹಾಜರಿದ್ದು ಗೌರಿ ನೆನಪುಗಳನ್ನು ಮೆಲುಕು ಹಾಕಿದರು. ಹಾಡಗಾರರಾದ ಜನಾರ್ದನ್‌ (ಜೆನ್ನಿ), ಚಿಂತನ್ ವಿಕಾಸ್ ಅವರು ಪಿ.ಲಂಕೇಶ್ ಅವರ ’ಅವ್ವ’ ಕವನವನ್ನು ಹಾಡುವ ಮೂಲಕ ಗೌರಿ ಸ್ಮರಣೆಗೆ ಮೆರುಗು ತಂದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!